ಸರ್ಕಾರದ ನೀತಿ ನಿಯಮಾವಳಿ ಜಾರಿಗೆ ತನ್ನಿ

KannadaprabhaNewsNetwork |  
Published : Feb 04, 2026, 02:30 AM IST
ಸಸಸಸ | Kannada Prabha

ಸಾರಾಂಶ

ಈ ಭಾರಿ ಬೇಸಿಗೆ ಇನ್ನು ಪ್ರಖರತೆ ಹೆಚ್ಚುತ್ತದೆ. ಈಗಿನಿಂದಲೇ ಕುಡಿವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿವ ನೀರು ಪೂರೈಕೆ ಹೊಣೆ ಹೊತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಬೇಕು.

ಕಾರಟಗಿ: ಮೂಲಸೌಲಭ್ಯಗಳ ಜತೆಗೆ ಅಗತ್ಯ ಸೇವೆಗಳನ್ನು ಸರ್ಕಾರ ರೂಪಿಸಿದ ನೀತಿ ನಿಯಮಾವಳಿ ಜಾರಿಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ಕಡತ ಕೆಂಪು ಪಟ್ಟಿಗೆ ಸೇರಿಸಿ ಸಾರ್ವಜನಕರಿಗೆ ತೊಂದರೆ ಕೊಡುವುದನ್ನು ಮೊದಲು ಅಧಿಕಾರಿಗಳು ನಿಲ್ಲಿಸಬೇಕೆಂದು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಖಡಕ್ ಎಚ್ಚರಿಕೆ ನೀಡಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸಂಜೆ ವಿವಿಧ ವಿಭಾಗಗಳ ನಿರ್ವಹಣೆ ಮಾಡುವ ಅಧಿಕಾರಿಗಳ,ಸಿಬ್ಬಂದಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮೊದಲಿಗೆ ಕುಡಿವ ನೀರಿನ ವಿಷಯ ಕುರಿತು ಪ್ರಸ್ತಾಪ ಮಾಡಿದ ಅಧ್ಯಕ್ಷ ಮೇಗೂರು, ಈ ಭಾರಿ ಬೇಸಿಗೆ ಇನ್ನು ಪ್ರಖರತೆ ಹೆಚ್ಚುತ್ತದೆ. ಈಗಿನಿಂದಲೇ ಕುಡಿವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿವ ನೀರು ಪೂರೈಕೆ ಹೊಣೆ ಹೊತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಬೇಕು. ಒಟ್ಟು ೨೩ ವಾರ್ಡ್‌ಗಳ ಪೈಕಿ ಅತ್ಯಂತ ಸಮಸ್ಯತ್ಮಾಕ ವಾರ್ಡ್‌ಗಳ ಪಟ್ಟಿ ಮಾಡಿ ಕೊಳವೆ ಬಾವಿ ಅವಶ್ಯಕತೆ ಇದ್ದರೆ ಕೊರೆಸುವ ವ್ಯವಸ್ಥೆ ಮಾಡಿಕೊಳ್ಳಿ. ಪಟ್ಟಣದಲ್ಲಿ ೧೫೦ ಬೋರವೆಲ್‌ ಕಾರ್ಯನಿರ್ವಹಿಸುತ್ತಿದ್ದು, ಒಂದು ವೇಳೆ ಯಾವುದರೂ ಕೈಕೊಟ್ಟರೆ ಆ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಿ, ರಾಜೀವ್‌ಗಾಂಧಿ ಕುಡಿವ ನೀರಿನ ಯೋಜನೆಯ ಬೃಹತ್ ಕೆರೆಯಲ್ಲಿ ನೀರು ಸಂಗ್ರಹದ ಮಾಹಿತಿ, ಫಿಲ್ಟರ್ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಕ್ಷಣದಿಂದ ಮೊದಲ ಆದ್ಯತೆಯಾಗಿ ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಪುರಸಭೆಯಲ್ಲಿ ಅಗತ್ಯ ಅನುದಾನ ಕ್ರೂಢೀಕರಣ ಮಾಡಿಕೊಂಡು ನೀರಿನ ಸಮಸ್ಯೆ ಉದ್ಭವವಾಗದಂತೆ ನೋಡಬೇಕೆಂದು ಅಧ್ಯಕ್ಷ ಮೇಗೂರು ಸೂಚಿಸಿದರು.

ಖಡಕ್ ಎಚ್ಚರಿಕೆ:ಇನ್ನು ಪುರಸಭೆಯಲ್ಲಿ ಫಾರಂ ೩ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಕಂದಾಯ ನಿರೀಕ್ಷಕ ಆದೆಪ್ಪ ನೇರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿವೆ.ಈ ಕೂಡಲೇ ಆದೆಪ್ಪ ಎಚ್ಚೆತ್ತುಕೊಂಡು ಪ್ರಾಮಾಣಿಕ ಕೆಲಸಕ್ಕೆ ಮುಂದಾಗದಿದ್ದಲ್ಲಿ ಅವರ ವಿರುದ್ಧ ತಿಕ್ಷಣ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಮಂಜುನಾಥ ಮೇಗೂರ ಖಡಕ್ ಎಚ್ಚರಿಕೆ ನೀಡಿದರು.

ಕಳೆದ ಕೆಲ ವರ್ಷಗಳಿಂದ ಪುರಸಭೆಯಲ್ಲಿ ಪ್ರತಿಯೊಂದು ದಾಖಲಾತಿಗೂ ಸಾರ್ವಜನಿಕರು ಹಣ ತೆತ್ತಬೇಕಾದ ಅನಿವಾರ್ಯತೆ ಬಂದೊದಗಿದೆ. ಫಾರಂ ೩ ಪಡೆಯಲು, ಮುಟೇಷನ್ ಪಡೆಯಲು, ಕಟ್ಟಡ ಪರವಾನಗಿ ಪಡೆಯಲು ಅಧಿಕಾರಿಯೇ ಹಣ ಕೀಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವುದಲ್ಲದೆ ಪುರಸಭೆಗೂ ಕೂಡ ಕೆಲವರು ದೂರು ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆಯ ಯಾವ ಇಲಾಖೆಯ ಅಧಿಕಾರಿಯಾಗಲಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಿದಲ್ಲಿ ಅಂತಹ ಅಧಿಕಾರಿಯನ್ನು ನಿರ್ದಾಕ್ಷಿಣ್ಯವಾಗಿ ಅಮಾನತ್ತುಗೊಳಿಸಲು ಸಂಬಂಧಿಸಿದ ಇಲಾಖೆಗೆ ನೇರವಾಗಿ ಸೂಚಿಸಲಾಗುವುದು ಎಂದರು.

ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆ ನಿಗದಿತ ವೇಳೆಯಲ್ಲಿ ಪಾವತಿಗೆ ಕ್ರಮ ವಹಿಸಲು ಸೂಚಿಸಿದರು. ಮುಖ್ಯವಾಗಿ ೨೮ ಜನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕಾರ್ಯ ಕಾರ್ಯ ನಿರ್ವಹಿಸವಂತೆ ಹೇಳಿದರು. ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್, ಮ್ಯಾನೇಜರ್ ಪರಮೇಶ್ವರಪ್ಪ, ಲೆಕ್ಕಾಧಿಕಾರಿ ನಾಗರಾಜ ತಳವಾರ, ರಾಘವೇಂದ್ರ, ಅನಂತ ಜೂರಟಗಿ, ಸೀಮಾ ರಾಣಿ, ಮಲ್ಲಮ್ಮ, ಅಕ್ಷತಾ ಕಮ್ಮಾರ ಸೇರಿದಂತೆ ಇನ್ನಿತರರು ಇದ್ದರು.

ಕಡತಗಳಿಗೆ ಹಣ ನೀಡದಿದ್ದರೆ ನೀವು ಫೈಲ್ ಮುಟ್ಟುವುದಿಲ್ಲವಂತೆ, ಹಣ ಕೊಟ್ಟ ನಂತರ ಫೈಲ್ ಮೂವ್ ಆಗ್ತಾವಂತೆ ಎಂದು ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕ್ತಾ ಇದ್ದಾರೆ. ಪುರಸಭೆ ಕಚೇರಿಯಲ್ಲಿಯೇ ಇಂಥ ವ್ಯವಹಾರ ಮಾಡುವ ಕ್ರಮ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ತಕ್ಕಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ