ಯಲಬುರ್ಗಾ: ಲಿಂಗಾಯತರಿಗೆ ಯಾವ ಸೂತಕಗಳಿಲ್ಲ.ಲಿಂಗದೀಕ್ಷೆ ಆದ ನಂತರ ಐದು ವಚನ ಓದಬೇಕು.ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.
ಜ್ಞಾನ ದೀಕ್ಷೆ ಎಂದರೆ ಅಧ್ಯಾತ್ಮಿಕ ಜ್ಞಾನದ ಉಪದೇಶವಾಗಿದೆ.ಇದು ಶಿಷ್ಯನ ಅಜ್ಞಾನ ಹೋಗಲಾಡಿಸಿ ಆತ್ಮಸಾಕ್ಷಾತ್ಕಾರದ ಕಡೆಗೆ ಕೊಂಡೊಯ್ಯುವ ಉನ್ನತ ಪ್ರಕ್ರಿಯೆಯಾಗಿದೆ. ಗುರುವು ಮಂತ್ರ ಅಥವಾ ಜ್ಞಾನ ಶಿಷ್ಯನಿಗೆ ನೀಡುವ ಮೂಲಕ ಆಂತರಿಕ ಶಕ್ತಿ ಜಾಗೃತಗೊಳಿಸುವ ಪ್ರಕ್ರಿಯೆಯಾಗಿದೆ.
ಏಕದೇವೋಪಾಸನೆಯು ಅನೇಕ ದೇವತೆಗಳ ಬದಲಿಗೆ ಒಬ್ಬನೇ ಬಸವೇಶ್ವರವರನ್ನು ಶ್ರದ್ಧೆಯಿಂದ ಆರಾಧಿಸುವ ಆಧ್ಯಾತ್ಮಿಕ ಮಾರ್ಗವಾಗಿದೆ.ಇದು ಮನಸ್ಸಿನ ಏಕಾಗ್ರತೆ,ನಂಬಿಕೆ ಮತ್ತು ಜೀವನದಲ್ಲಿ ಸಾರ್ಥಕತೆ ತರುತ್ತದೆ.ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಶರಣರ ತತ್ವಗಳಲ್ಲಿ ಮೂಢನಂಬಿಕೆ ತೊರೆದು ಸತ್ಯ ಮತ್ತು ಸರಳ ಜೀವನ ನಡೆಸಲು ಒತ್ತು ನೀಡುತ್ತದೆ ಎಂದರು.ಕ್ರಿಯಾ ದೀಕ್ಷೆಯು ಅಧಿಕೃತ ಗುರುಗಳಿಂದ ಕ್ರಿಯಾ ಯೋಗದ ತಂತ್ರಗಳನ್ನು ಕಲಿಯುವ ಮತ್ತು ಆಧ್ಯಾತ್ಮಿಕವಾಗಿ ಅನ್ವೇಷಿಸುವುದಾಗಿದೆ. ಶಿಷ್ಯನಿಗೆ ಪರಮಾತ್ಮನ ಅರಿವು,ಆಂತರಿಕ ಶಾಂತಿ,ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದರು.
ನಾಗರಾಳದ ಬಸವರಾಜ ಮತ್ತು ಪಾರ್ವತಿ ನವ ದಂಪತಿಗಳು ಶರಣರ ವಚನಗಳಂತೆ ಪ್ರತಿಜ್ಞಾ ವಿಧಿ ಬೋಧಿಸಿ ಕಲ್ಯಾಣ ಕಾರ್ಯಕ್ರಮ ನೆರವೇರಿಸಿದರು. ಕುಷ್ಟಗಿಯ ಹುಲಿಗೆಮ್ಮ ರಾಮಣ್ಣ ಭಜಂತ್ರಿ ಕಲ್ಯಾಣ ಮಹೋತ್ಸವಕ್ಕೆ ಮಾಂಗಲ್ಯ ಸೇವೆ ಹಾಗೂ ನಿಂಗಪ್ಪ ಮನ್ನೆರಾಳ ವಧುವರರಿಗೆ ವಸ್ತ್ರ ವಿತರಣೆ ಸೇವೆ ಸಲ್ಲಿಸಿದರು. ಕಲ್ಯಾಣ ಮಹೋತ್ಸವಕ್ಕೂ ಮೊದಲು ಅನುಭವ ಮಂಟಪದಲ್ಲಿ ನೂರಾರು ಮಹಿಳೆಯರು ಸಾಮೂಹಿಕ ಲಿಂಗ ಪೂಜೆ ಸಲ್ಲಿಸಿದರು.