ಕುಶಾಲನಗರ: ಬಸವಣ್ಣನವರ ವಚನಗಳು ಕೇವಲ ಓದಿಗೆ ಸೀಮಿತವಾಗದೆ, ಜೀವನದ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು ಎಂದು ಪುಣೆಯ ಬಸವ ತಿಳಿವಳಿಕೆ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಬಸವಾದಿ ಶರಣರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಚನಗಳು ಸಮಾನತೆ, ಮಾನವೀಯತೆ ಹಾಗೂ ವೈಚಾರಿಕ ಕ್ರಾಂತಿಯ ಸಂದೇಶವನ್ನು ಸಾರಿದ್ದು, ಲಿಂಗಾಯತವು ಜಾತಿ ಅಥವಾ ಧರ್ಮವಲ್ಲ; ಅದು ಪ್ರಾಯೋಗಿಕ ಬದುಕಿನತ್ತ ಕೊಂಡೊಯ್ಯುವ ವೈಚಾರಿಕ ಆಂದೋಲನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಮಾತನಾಡಿ, ಬಸವಣ್ಣನವರ ವಚನಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದರು.ಅಂತಾರಾಷ್ಟ್ರೀಯ ಹಿಂದುಸ್ತಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರ ವಚನ ಗಾಯನ ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಕುಲಸಚಿವ ಮೌಲ್ಯಮಾಪನ ಡಾ. ಸುರೇಶ್ ಎಂ, ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪುಟ್ಟರಾಜಪ್ಪ, ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಂಗಮೇಶ ಮತ್ತಿತರರರು ಭಾಗವಹಿಸಿದ್ದರು.ಕನ್ನಡ ವಿಭಾಗದ ಉಪನ್ಯಾಸಕ ಡಾ. ರಮೇಶ್ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿ ವಂದಿಸಿದರು.