ಕನ್ನಡಪ್ರಭ ವಾರ್ತೆ ನಂಜನಗೂಡು
ಬಾಬಾ ಸಾಹೇಬರ ತತ್ವ ಸಿದ್ಧಾಂತಗಳು, ಅವರು ಸಮಾಜ ಪರಿವರ್ತನೆಗಾಗಿ ನಡೆಸಿದ ಹೋರಾಟದ ಬದುಕು, ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ತಾಲೂಕಿನ ಬದನವಾಳು ಗ್ರಾಮದಲ್ಲಿ ಗ್ರಾಮಸ್ಥರು 35 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದನವಾಳು ಗ್ರಾಮದಲ್ಲಿ ಉದ್ಘಾಟನೆ ಆಗಿರುವುದು ಕೇವಲ ಪುತ್ಥಳಿಯಲ್ಲ, ಬಾಬಾ ಸಾಹೇಬರ ಅವರ ಆದರ್ಶಗಳನ್ನು ಸದಾ ಜೀವಂತವಾಗಿರಿಸುವ ಆರದ ದೀಪವಾಗಿದೆ. ಬಾಬಾ ಸಾಹೇಬರ ಪುತ್ಥಳಿಯ ಅನಾವರಣದೊಂದಿಗೆ ಬಾಬಾ ಸಾಹೇಬರ ತತ್ವ, ಸಿದ್ಧಾಂತ, ಅವರು ಜೀವನದುದ್ದಕ್ಕೂ ಕಷ್ಟಪಟ್ಟು ನಡೆಸಿದ ಹೋರಾಟದ ಬದುಕನ್ನು ನಾವೆಲ್ಲರೂ ಮೈಗೂಡಿಸಿಕೊಂಡು ನ್ಯಾಯ ಸಮಾನತೆ ಮತ್ತು ಭ್ರಾತೃತ್ವದ ಮಾರ್ಗದಲ್ಲಿ ಸಾಗುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಕ್ಷಣಿಕ ವಾತಾವರಣ ನಿರ್ಮಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಈ ಪ್ರತಿಮೆ ಎಲ್ಲರಿಗೂ ಸ್ಪೂರ್ತಿ ನೀಡಲಿದೆ ಎಂದರು.ಸಂಸದ ಸುನಿಲ್ ಬೋಸ್ ಮಾತನಾಡಿ, ಶ್ರೀ ರಾಮನ ಪಾದ ಸ್ಪರ್ಶದಿಂದ ಅಹಲ್ಯಯ ಶಾಪ ವಿಮೋಚನೆಯಾದಂತೆ, ಬಾಬಾ ಸಾಹೇಬರ ಸಂವಿಧಾನದ ಮೂಲಕ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ಶೋಷಿತ ಸಮುದಾಯಗಳು ಶಾಪ ವಿಮೋಚನೆಯಾಗಿದೆ, ಸಮಾನತೆಯಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾದರೆ ದಲಿತರಿಗೆ ಅವಕಾಶ ಕಲ್ಪಿಸಿ:ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಮಾಧ್ಯಮಗಳಲ್ಲಿ ಪ್ರತಿದಿನ ಮುಖ್ಯಮಂತ್ರಿಗಳು ಬದಲಾವಣೆಯ ವಿಚಾರ ಮುನ್ನೆಲೆಗೆ ಬರುತ್ತಿದೆ. ಮುಖ್ಯಮಂತ್ರಿ ಬದಲಾಗುವುದು ಬಿಡುವುದು ಕಾಂಗ್ರೆಸ್ ಆಂತರಿಕ ವಿಚಾರ, ಒಂದು ವೇಳೆ ಮುಖ್ಯಮಂತ್ರಿ ಬದಲಾದಲ್ಲಿ ದಲಿತರಿಗೆ ಏಕೆ ಅವಕಾಶ ಕಲ್ಪಿಸಬಾರದು? ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಂತರ ದಲಿತರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ದಿ.ವಿ.ಶ್ರೀನಿವಾಸ ಪ್ರಸಾದ್ ಹೇಳುತ್ತಿದ್ದಂತೆ ದಲಿತರಿಗೆ ಕಾಂಗ್ರೆಸ್ ನಲ್ಲಿ ಮಾತ್ರ ಮುಖ್ಯಮಂತ್ರಿಯಾಗುವ ಅವಕಾಶವಿದೆ, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಸಿ. ಮಹದೇವಪ್ಪ, ಪರಮೇಶ್ವರ್ ಅಂತಹವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು ಎಂದರು.ಜಾತಿ ಗಣತಿ ಜಾರಿ ಉತ್ತಮ ತೀರ್ಮಾನ:
ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದು ಉತ್ತಮ ತೀರ್ಮಾನ, ಜಾತಿ ಗಣತಿ ಜಾರಿಯಾಗಬೇಕು, ಆ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯು ಜಾರಿಯಾಗಬೇಕು, ಸಿದ್ದರಾಮಯ್ಯರವರು ಉತ್ತಮ ಕೆಲಸ ಮಾಡಿ ಇತಿಹಾಸ ಸೃಷ್ಟಿಸುವುದರಲ್ಲಿ ಸದಾ ಮುಂದಿದ್ದಾರೆ, ಅವರ ಉತ್ತಮ ಕೆಲಸವನ್ನು ಪಕ್ಷಾತೀತವಾಗಿ ನಾನು ಬೆಂಬಲಿಸುತ್ತೇನೆ, ಅನೇಕರ ಅಪಸ್ವರದ ನಡುವೆ ಜಾತಿಗಣತಿ ಜಾರಿಯಾದಲ್ಲಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಆಗಲಿದೆ ಎಂದರಲ್ಲದೆ ಬಾಬಾ ಸಾಹೇಬರು ಜೀವನದಲ್ಲಿ ನೋವುಂಡು ಶೋಷಣೆಗೆ ಒಳಗಾಗಿದ್ದವರಿಗೆ ಮುಕ್ತಿ ನೀಡಿದವರು, ಅಂತಹ ಪುಣ್ಯಾತ್ಮರ ಪುತ್ಥಳಿ ನೋಡಿದಾಗಲೆಲ್ಲ ನಮಗೆ ಸ್ಪೂರ್ತಿ ಸಿಗಲಿದೆ ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದಲಿತ ಮುಖಂಡ ರಾಮಸ್ವಾಮಿ, ವಾಣಿ ಕೆ. ಶಿವರಾಂ, ಡಾ. ಪುಷ್ಪಲತಾ ಅಪ್ಪಾಜಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ರಂಗಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ತಾಪಂ ಮಾಜಿ ಸದಸ್ಯ ಬಿ.ಎಸ್. ರಾಮು, ಮುಖಂಡರಾದ ಸೋಮು, ಗುರುಸ್ವಾಮಿ, ವಿಜಯ್ ಕುಮಾರ್, ಕುಂಬ್ರಹಳ್ಳಿ ಸುಬ್ಬಣ್ಣ, ಎನ್. ಎಂ. ಮಂಜುನಾಥ್, ಶ್ರೀನಿವಾಸಮೂರ್ತಿ, ರಾಜೇಶ್, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ಗ್ರಾಪಂ ಸದಸ್ಯರಾದ ಮಹದೇವು, ಮುದ್ದುಮಾದಶೆಟ್ಟಿ, ಮಾಜಿ ಗ್ರಾಪಂ ಸದಸ್ಯ ಮಹದೇವು, ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ತಾಪಂ ಮಾಜಿ ಸದಸ್ಯ ಶಿವಣ್ಣ, ಜಿಪಂ ಮಾಜಿ ಸದಸ್ಯ ಲತಾಸಿದ್ಧಶೆಟ್ಟಿ, ಗ್ರಾಮದ ಯಜಮಾನರು, ಗ್ರಾಮಸ್ಥರು ಇದ್ದರು.