ಕಾಂಗ್ರೆಸ್ ನ ಯೋಜನೆಗಳು ‘ಗ್ಯಾರಂಟಿ’ ಅನುಷ್ಠಾನ: ಲಕ್ಷ್ಮೀ

KannadaprabhaNewsNetwork |  
Published : Mar 01, 2024, 02:19 AM IST
ಮಾಗಡಿಯ ಕೋಟೆ ಮೈದಾನದ ಗ್ಯಾರಂಟಿ ಸಮಾವೇಶಕ್ಕೆ ಸೇರಿದ ಮಹಿಳಾ ಫಲಾನುಭವಿಗಳು. | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದು ತುಂಬಾ ಸಂತೋಷ. ಕೇಂದ್ರ ಸರ್ಕಾರ ಇದಕ್ಕಾಗಿ ಐದು ಸಾವಿರ ಕೋಟಿ ಖರ್ಚು ಮಾಡಿದೆ. ಆದರೆ ನಮ್ಮ ಸರ್ಕಾರ ಒಂದು ತಿಂಗಳಿಗೆ ಮಹಿಳೆಯರಿಗೆ 4 ಸಾವಿರ ಕೋಟಿ ನೀಡಿ ರಾಮರಾಜ್ಯ ಸ್ಥಾಪನೆಗೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ಕಾಂಗ್ರೆಸ್ ಎಂದರೆ ಬದ್ಧತೆ, ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದೆ. ವಿಪಕ್ಷಗಳು ನಮ್ಮನ್ನ ಟೀಕೆ ಮಾಡಿದರೂ ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕ್ಕರ್ ಹೇಳಿದರು.

ಪಟ್ಟಣದ ಕೋಟೆ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಗೃಹಲಕ್ಷ್ಮೀ ಯೋಜನೆಯು ಅನುಕೂಲವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದು ತುಂಬಾ ಸಂತೋಷ. ಕೇಂದ್ರ ಸರ್ಕಾರ ಇದಕ್ಕಾಗಿ ಐದು ಸಾವಿರ ಕೋಟಿ ಖರ್ಚು ಮಾಡಿದೆ. ಆದರೆ ನಮ್ಮ ಸರ್ಕಾರ ಒಂದು ತಿಂಗಳಿಗೆ ಮಹಿಳೆಯರಿಗೆ 4 ಸಾವಿರ ಕೋಟಿ ನೀಡಿ ರಾಮರಾಜ್ಯ ಸ್ಥಾಪನೆಗೆ ಮುಂದಾಗಿದೆ. ಜನರಿಗೆ ನೀರು, ಹಾಲು, ಮಜ್ಜಿಗೆಯ ವ್ಯತ್ಯಾಸ ಗೊತ್ತಿದೆ ಎಂದರು,

ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾಗಡಿಯಲ್ಲೇ 51ಸಾವಿರ ಕುಟುಂಬಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯಾಗಿವೆ.

ನಾವು ಅದಾನಿ, ಅಂಬಾನಿಗೆ ಸಹಾಯ ಮಾಡುತ್ತಿಲ್ಲ, ನಾವು ನಮ್ಮ ಬಡ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಸ್ವಾಭಿಮಾನದಿಂದ ಓಡಾಡಬಹುದು, ಕೆಲವರು ಅಧಿಕಾರದಲ್ಲಿದ್ದಾಗ ಒಂದು ಬಣ್ಣ, ಇಲ್ಲದಿದ್ದಾಗ ಒಂದು ಬಣ್ಣ ಬದಲಾಯಿಸುವರು. ಆದರೆ, ಡಿ.ಕೆ.ಸುರೇಶ್ ಯಾವಾಗಲೂ ಕೆಲಸ ಮಾಡುವ ರಾಜಕಾರಣಿ, ಅವರಿಗೆ ಮತ್ತೊಂದು ಅವಕಾಶ ಸಿಗಬೇಕು, ಅವರು ಗೆದ್ದರೆ ಮುಂದಿನ ವಿಧಾನಸಭಾ ಚುನಾವಣೆ ಗೆದ್ದಹಾಗೆಯೇ ಎಂದು ಶಾಸಕ ಬಾಲಣ್ಣ ಹೇಳಿದ್ದರು. ಹಾಗಾಗಿ ಅವರು ಗೆದ್ದರೆ ಅವರೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಅಲ್ಲದೇ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ 6ನೇ ಗ್ಯಾರಂಟಿ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ 6ನೇ ಗ್ಯಾರಂಟಿ ಘೋಷಣೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಒಂದು ಹೊಸ ಬದಲಾವಣೆಯನ್ನು ನೀವೆಲ್ಲರೂ ಕಂಡಿದ್ದೀರಿ, ಸರ್ಕಾರದಲ್ಲಿ ಹಣವಿದೆ ಎಂದು ಹೇಳಿ ಗ್ಯಾರಂಟಿ ಕೊಟ್ಟಿರುವುದಲ್ಲ. ನಾವು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಕಷ್ಟ ಕೇಳಿದ್ದೇವು, ಕೋವಿಡ್ ವೇಳೆ ಯಾರೂ ಕೂಡ ಹೊರಗಡೆ ಬರಲಿಲ್ಲ, ಆ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ನ ನಾಯಕರು ಜನರ ಕಷ್ಟ ಕೇಳಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ರೈತರ ಸಮಸ್ಯೆಗಳನ್ನು ಆಲಿಸಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ಕಷ್ಟಕ್ಕೆ ಮಿಡಿದಿದೆ. ಕೋವಿಡ್ ಸಮಯದಲ್ಲಿ ಲಾಕ್ ಡೌನ್ ಮಾಡಿದ್ದೀರಿ, ಜನರಿಗೆ ತಿಂಗಳಿಗೆ 10 ಸಾವಿರ ಕೊಡಿ ಎಂದು ಬಿಜೆಪಿ ಸರ್ಕಾರವನ್ನು ಆಗ ಅಂಗಲಾಚಿ ಬೇಡಿಕೊಂಡೆವು. ಆದರೆ ಬಿಜೆಪಿ ಸರ್ಕಾರ ಯಾವುದಕ್ಕೂ ಸ್ಪಂದಿಸಲೇ ಇಲ್ಲ. ಬಡವರು, ಹೆಣ್ಣುಮಕ್ಕಳ ಮೇಲೆ ಬಿಜೆಪಿ ಸರ್ಕಾರ ಕರುಣೆ ತೋರಲಿಲ್ಲ ಎಂದು ಟೀಕಿಸಿದರು.

ಬಿಜೆಪಿಯವರು ಸ್ಪಂದಿಸಿಲ್ಲ ಎಂದು ನಾವು ಸುಮ್ಮನೆ ಕೂರಲಿಲ್ಲ. ಜಿಎಸ್ಟಿ ವಿರುದ್ಧ ಇಡೀ ದೇಶದಾದ್ಯಂತ ಹೋರಾಟ ಮಾಡಿದೆವು, ದಿನನಿತ್ಯ ಬಳಸುವ ಪದಾರ್ಥಗಳಿಗೆ ಜಿಎಸ್ಟಿ ಹಾಕಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದೆವು. ಇದಕ್ಕಾಗಿ ಬೀದಿ ಬೀದಿಯಲ್ಲಿ ಕಾಂಗ್ರೆಸ್ ನ ನಾಯಕರು ಹೋರಾಟ ಮಾಡಿದರು, ಯಾಕೆ 5 ಗ್ಯಾರಂಟಿಗಳನ್ನು ಕೊಟ್ಟಿದ್ದೀವಿ ಅನ್ನೋ ಚರ್ಚೆ.

ಜನರಿಗೆ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಆರೋಪಿಸಿದರು, ಜನರ ಆಶೀರ್ವಾದ ಇರೋವರೆಗೂ ಸರ್ಕಾರ ದಿವಾಳಿಯಾಗಲ್ಲ. ನಾವು ಯಾವುದೇ ಧರ್ಮದ ಆಧಾರದ ಮೇಲೆ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ಹಿಂದೆ ಹಲವು ಗ್ಯಾರಂಟಿಗಳನ್ನು ಕೊಟ್ಟಿದೆ. ಪ್ರತಿ ತಿಂಗಳು 5-6 ಸಾವಿರ ರು. ಪ್ರತಿ ಕುಟುಂಬಕ್ಕೂ ಸೇರುತ್ತಿದೆ ಎಂದರು.

ತಮ್ಮ ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಅವರು, ನಾನು ದೇಶ ವಿಭಜನೆ ಮಾಡುವುದಕ್ಕೆ ಹೊರಟಿಲ್ಲ, ನಾನೊಬ್ಬ ಭಾರತೀಯ, ಕನ್ನಡಿಗನಾಗಿ ಕೇಳುತ್ತಿದ್ದೀನಿ, ಬೀದಿ ವ್ಯಾಪಾರಿಗಳು, ರೈತರಿಗಾಗಿ ಕನ್ನಡಿಗರಿಗಾಗಿ ಧ್ವನಿ ಎತ್ತಿದ್ದೇನೆ. ಈ ರಾಜ್ಯದ ಬಜೆಟ್ 3 ಲಕ್ಷದ 71 ಸಾವಿರ ಕೋಟಿ ಇದೆ. ಕೇಂದ್ರಕ್ಕೆ ನಾವು ತೆರಿಗೆ ರೂಪದಲ್ಲಿ 4 ಲಕ್ಷದ 44 ಸಾವಿರ ಕೋಟಿ ಕೊಡುತ್ತೇವೆ. ಆದರೆ ನಮಗೆ ಕೊಡುವುದು ಕೇವಲ 48 ಸಾವಿರ ಕೋಟಿ ರು. ಇದು ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ