ಜಿಎಸ್‌ಟಿ 2.0 ಜಾರಿ ಕ್ರಾಂತಿಕಾರಿ ನಿರ್ಧಾರ: ಗೌತಮ್ ಗೌಡ

KannadaprabhaNewsNetwork |  
Published : Sep 24, 2025, 01:00 AM IST
22ಕೆಆರ್ ಎಂಎನ್ 5.ಜೆಪಿಜಿರಾಮನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಆತ್ಮನಿರ್ಭರ ಭಾರತ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ 2.0 ಜಾರಿಗೆ ತಂದಿರುವುದು ಕ್ರಾಂತಿಕಾರಿ ನಿರ್ಧಾರ ಎಂದು ಕೆಎಸ್ಐಸಿ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಗೌತಮ್‌ಗೌಡ ಅಭಿಪ್ರಾಯಪಟ್ಟರು.

ರಾಮನಗರ: ಆತ್ಮನಿರ್ಭರ ಭಾರತ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ 2.0 ಜಾರಿಗೆ ತಂದಿರುವುದು ಕ್ರಾಂತಿಕಾರಿ ನಿರ್ಧಾರ ಎಂದು ಕೆಎಸ್ಐಸಿ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಗೌತಮ್‌ಗೌಡ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ 2.0 ಜಾರಿಯಿಂದಾಗಿ ಆರ್ಥಿಕತೆ ಮತ್ತಷ್ಟು ಬೆಳವಣಿಗೆ ಕಾಣಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಈ ಹಿಂದೆ ಜಿಎಸ್‌ಟಿ ಶೇ.5, ಶೇ.12, ಶೇ.18 ಹಾಗೂ ಶೇ.28ರ ಬದಲಿಗೆ ಇನ್ನು ಶೇ.5 ಹಾಗೂ ಶೇ.18ರ ಸ್ತರ ಮಾತ್ರ ಇರಲಿದೆ. ಹೊಸ ನಿಯಮದಂತೆ ಶೇ.12ರಷ್ಟು ಜಿಎಸ್ಟಿ ಸ್ಲ್ಯಾಬ್ ಗೆ ಒಳಪಟ್ಟಿದ್ದ ಶೇ.99 ಸರಕುಗಳು ಶೇ.5ರಷ್ಟಕ್ಕೆ ಇಳಿಯಲಿದೆ. ಇದರಿಂದ ಸರಕು, ಸೇವೆಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ತಿಳಿಸಿದರು.

ಕ್ರಾಂತಿಕಾರಿ ನಿರ್ಧಾರ ಬೆಲೆ ಇಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಇದು ದೇಶೀಯ ವ್ಯಾಪಾರ ವಹಿವಾಟನ್ನು ಹೆಚ್ಚಿಸಲಿದೆ. ಜನರಲ್ಲಿ ಕೊಳ್ಳವು ಶಕ್ತಿಯೂ ಹೆಚ್ಚಾಗಲಿದೆ. ಇದರಿಂದ ಸರಕುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದು ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ಪ್ರಮಾಣ ಇಳಿಮುಖವಾಗಲಿದೆ

ಎಂದು ವಿವರಿಸಿದರು.

ನೋಟ್ ಬ್ಯಾನ್ ಹಾಗೂ ಜಿಎಸ್‌ಟಿ ನಿರ್ಧಾರದಿಂದ ನಮ್ಮ ದೇಶದಲ್ಲಿ 25 ಕೋಟಿ ಜನತೆ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಪ್ರಧಾನಿ ಇದನ್ನೇ ನಿಯೋ ಮಿಡ್ಲಕ್ಲಾಸ್ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳಿಗೆ ಇದು ಅರ್ಥವಾಗಿರಲಿಲ್ಲ. ಈಗ ಸತ್ಯ ಕಣ್ಣ ಮುಂದೆ ಇದ್ದರೂ ಓಪ್ಪುವ ಮನಸ್ಥಿತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿಎಸ್ಟಿ ಜಾರಿಗೆ ಬಂದಾಗ 60 ಲಕ್ಷ ಜಿಎಸ್ಟಿ ಪಾವತಿದಾರರಿದ್ದರು. ಇದೀಗ 1.37 ಕೋಟಿ ಇದ್ದಾರೆ. ಜಿಎಸ್ಟಿ ತೆರಿಗೆ 7.16 ಲಕ್ಷ ಕೋಟಿ ಸಂಗ್ರಹವಾಗುತ್ತಿತ್ತು. ಆದರೆ 19 ಲಕ್ಷ ಕೋಟಿ ರು. ಸಂಗ್ರಹವಾಗುತ್ತಿದೆ. ಇದು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ. ಭಾರತದ ಆತ್ಮನಿರ್ಭರತೆ ಹಾಗೂ ಆರ್ಥಿಕ ಬೆಳವಣಿಗೆಯನ್ನು ವಿಶ್ವದ ಹಲವು ರಾಷ್ಟ್ರಗಳು ಸಹಿಸುತ್ತಿಲ್ಲ. ಭಾರತದ ಮೇಲೆ ನಾನಾ ಒತ್ತಡ ತಂತ್ರಗಳನ್ನು ಅನುಸರಿಸುತ್ತಿದೆ. ಈ ಸಂದರ್ಭದಲ್ಲಿ ನಾವು ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಳ ಮಾಡಿ, ಆರ್ಥಿಕ ಸುಭದ್ರತೆಗೆ ಕೊಡುಗೆ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಸುರೇಶ್, ಮುಖಂಡರಾದ ಪದ್ಮನಾಭ್, ಚಂದ್ರಶೇಖರ್ ರೆಡ್ಡಿ, ಜಗದೀಶ್, ನಾಗೇಶ್, ಕೆಂಪಣ್ಣ, ಮಂಜು, ಚಂದನ್ ಮೋರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜಯಕುಮಾರ್, ಕಾಳಯ್ಯ, ಚಂದ್ರಶೇಖರ್ ರೆಡ್ಡಿ, ಚನ್ನಪ್ಪ, ಸಿದ್ದಲಿಂಗು, ನಾಗಮ್ಮ, ಲಕ್ಷ್ಮೀ, ದೇವಿಕ ಉಪಸ್ಥಿತರಿದ್ದರು.

ಬಾಕ್ಸ್ ................

ಹಿಂದು ಧರ್ಮ ಹೊಡೆಯಲು ಷಡ್ಯಂತ್ರ

ರಾಮನಗರ: ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ಧರ್ಮವನ್ನು ಹೊಡೆಯಲು ಷಡ್ಯಂತ್ರ ನಡೆಸುತ್ತಿದೆ ಎಂದು ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತರನ್ನು ಒಡೆಯಲು ಹೋಗಿ, ಅದರ ಫಲ ಅನುಭವಿಸಿದ್ದರು. ಇದೀಗ ಮತ್ತೆ ಅಂತಹದೆ ತಪ್ಪನ್ನು ಮಾಡಲು ಹೊರಟಿದ್ದಾರೆ. ಈಗ ಜಾತಿ ಗಣತಿ ಹೆಸರಿನಲ್ಲಿ ಇಡೀ ಹಿಂದುಗಳನ್ನು ಒಡೆಯಲು ಹೊರಟಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಕ್ರಿಶ್ಚಿಯನ್ ಜಾತಿಗಳು ಹುಟ್ಟಿದ್ದು ಹೇಗೆ? ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕ್ರಿಶ್ಚಿಯನ್ ಧರ್ಮದಲ್ಲಿ 48 ಜಾತಿಗಳನ್ನು ಸೇರಿಸಲು ಮುಂದಾಗಿದ್ದಾರಾ ಎಂದು ಪ್ರಶ್ನಿಸಿದರು.

ಕ್ರಿಶ್ಚಿಯನ್ ಉಪಜಾತಿಗಳಲ್ಲಿ 33 ತೆಗೆದಿರುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ 15ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಜಾತಿಗಳನ್ನು ಹಾಗೇ ಬಿಟ್ಟಿದ್ದಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದ ಅವರು, ದಲಿತರು ಎಚ್ಚೆತ್ತುಕೊಳ್ಳಬೇಕು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬುದನ್ನು ಪಾಲಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಜಾತಿ ಗಣತಿಯಲ್ಲಿ ಉಪಜಾತಿಗಳನ್ನು ಸೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಹಿಂದೂ ಧರ್ಮ ಮತ್ತು ಜಾತಿಯನ್ನು ಒಡೆಯಲು ಹುನ್ನಾರ ಮಾಡಿದ್ದಾರೆ. ಪ್ರತಿಯೊಬ್ಬರು ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಹೆಸರಿನಲ್ಲಿ ನಿಮ್ಮ ಜಾತಿಗಳನ್ನು ಮಾತ್ರ ನಮೂದಿಸಿ ಉಪಜಾತಿಗಳನ್ನು ಬರೆಸಬೇಡಿ. ಇದು ಭವಿಷ್ಯದಲ್ಲಿ ಗೊಂದಲ ಮೂಡಿಸಲಿದೆ. ದಯಮಾಡಿ ಉಪಜಾತಿಗಳನ್ನು ನಮೂದಿಸಬೇಡಿ ಎಂದು ಮನವಿ ಮಾಡಿದರು.

22ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ