ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸದುದ್ದೇಶದಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದ್ದು, ಮಾಹಿತಿ ನೀಡುವಂತೆ ಜನರನ್ನು ಒತ್ತಾಯಿಸುವುದಿಲ್ಲ. ಸಮೀಕ್ಷೆಯಲ್ಲಿ ಜನ ಭಾಗಿಯಾಗುವುದು ಸ್ವಯಂಪ್ರೇರಿತ ಪ್ರಕ್ರಿಯೆ. ಮಾಹಿತಿ ನೀಡಲು ಜನ ನಿರಾಕರಿಸಬಹುದು ಎಂದು ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗ ಹೈಕೋರ್ಟ್‌ಗೆ ಸ್ಪಷ್ಟಪಡಿಸಿವೆ.ಸಮೀಕ್ಷೆ ನಡೆಸಲು ಆಯೋಗಕ್ಕೆ ನಿರ್ದೇಶಿಸಿ ಸೆ.12ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಒಕ್ಕಲಿಗರ ಸಂಘ, ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಮತ್ತು ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಐದು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಸಿದ್ದರು.
ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಎರಡು ಗಂಟೆಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಪೀಠ ಬುಧವಾರಕ್ಕೆ ವಿಚಾರಣೆ ಮುಂದೂಡಿದೆ.ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸರ್ಕಾರ ಜಾತಿ ಗಣತಿ ನಡೆಸಲು ಮುಂದಾಗಿದೆ ಎಂದು ಅರ್ಜಿದಾರರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಇದು ಜಾತಿ ಗಣತಿಯಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಸ್ಪಷ್ಟಪಡಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರತಿಯೊಬ್ಬರನ್ನು ಗುರುತಿಸಿ, ಅವರ ಜಾತಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬುದು ಅರ್ಜಿದಾರರ ವಾದ. ಹಾಗಾದರೆ, ಜಾತಿ ಗಣತಿ ಮತ್ತು ಸಮೀಕ್ಷೆಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿತು.ಅದಕ್ಕೆ ಸಿಂಘ್ವಿ ಉತ್ತರಿಸಿ, ಸಂಸ್ಕೃತ ಪದ ಸಮೀಕ್ಷಾ ಎಂದರೆ ಸೆನ್ಸಸ್ (ಗಣತಿ) ಅಲ್ಲ. ಅರ್ಜಿದಾರರು ತಪ್ಪು ಪದ ಬಳಸಿ ಹಾದಿತಪ್ಪಿಸುತ್ತಿದ್ದಾರೆ. ದತ್ತಾಂಶವಿಲ್ಲದೆ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗದು. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಮತ್ತು ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸಂವಿಧಾನಕ್ಕೆ 105ನೇ ತಿದ್ದುಪಡಿ ಬಳಿಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪಟ್ಟಿ ತಯಾರಿಸಲು ಸರ್ಕಾರಕ್ಕೆ ಅವಕಾಶ ಸಿಕ್ಕಿದೆ. ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಬಹುದು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಬಿಹಾರದಲ್ಲಿ ಕೂಡ ಜಾತಿ ಗಣತಿ ಮಾಡಲಾಗಿದೆ. ದತ್ತಾಂಶ ಸಂಗ್ರಹಿಸುವಾಗ ಖಾಸಗಿತನ ಉಲ್ಲಂಘನೆಯಾಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ಸಮೀಕ್ಷೆ ನಡೆಸಲು ನ್ಯಾಯಾಲಯ ತಡೆ ನೀಡಬಾರದು ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಆಯೋಗ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು, ಜನ ತಮಗೆ ಇಷ್ಟವಿಲ್ಲದಿದ್ದರೆ ಮಾಹಿತಿ ನೀಡಲು ನಿರಾಕರಿಸಬಹುದು. ಮೇಲಾಗಿ ಸರ್ಕಾರ ವಾಣಿಜ್ಯ ಉದ್ದೇಶಕ್ಕೆ ಸಮೀಕ್ಷೆಯಿಂದ ಸಂಗ್ರಹಿಸಿದ ಅಂಕಿ-ಅಂಶ ಬಳಸುವುದಿಲ್ಲ ಹಾಗೂ ಇತರರಿಗೆ ನೀಡುವುದಿಲ್ಲ. ಕೇವಲ ವ್ಯಕ್ತಿಗಳನ್ನು ಗುರುತಿಸಲು ಆಧಾರ್ ಬಳಕೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಸಮೀಕ್ಷೆಗಾಗಿ ಸರ್ಕಾರ ಮತ್ತು ಆಯೋಗ ನೀಡಿರುವ ಕೈಪಿಡಿಯಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂಥ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಹಿಂದುಳಿದ ವರ್ಗಗಳ ಕಾಯ್ದೆ ಅಡಿ ಜಾತಿಗಣತಿ ನಡೆಸುತ್ತಿದ್ದಾರೆ. ಡಿಜಿಟಲ್ ಆ್ಯಪ್ ಮೂಲಕವೂ ಸರ್ವೆ ನಡೆಸಲಾಗುತ್ತಿದೆ. ಈ ಅಂಕಿ-ಅಂಶಗಳಿಗೆ ಯಾವುದೇ ರಕ್ಷಣೆ ಒದಗಿಸಿಲ್ಲ ಎಂದು ಆಕ್ಷೇಪಿಸಿದರು.ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ ಸೆಕ್ಷನ್ 9(1)(2) ಅಡಿ ಸಮೀಕ್ಷೆ ನಡೆಸಲು ಯಾವುದೇ ವಿಧಾನವಿಲ್ಲ. ಸಮೀಕ್ಷೆಯಲ್ಲಿ ಇಡೀ ರಾಜ್ಯದ ಜನತೆ ಒಳಗೊಳ್ಳುತ್ತಾರೆ. ಇದು ಗಣತಿಯಲ್ಲದೆ ಬೇರೇನೂ ಅಲ್ಲ. ಇದು ಸಂವಿಧಾನದ ಪರಿಚ್ಛೇದ 342Aನೇ ವಿಧಿಗೆ ವಿರುದ್ಧವಾಗಿದೆ. ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದು ಚುನಾವಣೆಗಾಗಿ ಪ್ರತಿ ಜಾತಿಯ ಸಂಖ್ಯೆಯನ್ನು ಪತ್ತೆ ಮಾಡುವ ಬಣ್ಣದ ತಂತ್ರವಾಗಿದೆ ಎಂದು ಆರೋಪಿಸಿದರು.
ಜಾತಿ ಗುರುತಿಸುವಿಕೆಯನ್ನು ಸ್ವೇಚ್ಛೆಯಿಂದ ಮಾಡಲಾಗುತ್ತಿದೆ. ಜಾತಿ ಗುರುತಿಸುವುದಕ್ಕೆ ಪೂರಕವಾಗಿ ಯಾವುದೇ ಅಧ್ಯಯನವನ್ನು ಸರ್ಕಾರ ಮಾಡಿಲ್ಲ. ಇದರಿಂದ ನಕಲಿ ಸಾಧ್ಯತೆ ಹೆಚ್ಚಾಗಲಿದೆ. ಜನ ತಪ್ಪು ದತ್ತಾಂಶ ನೀಡುವ ಸಾಧ್ಯತೆ ಇದೆ. ಮಾಹಿತಿಯ ಖಾಸಗಿತನದ ಪ್ರಶ್ನೆಯೂ ಇಲ್ಲಿದ್ದು, ಡಿಜಿಟಲ್ ರೂಪದಲ್ಲಿ ದಾಖಲಿಸಿದ ದತ್ತಾಂಶ ಸೋರಿಕೆಯಾಗುವುದನ್ನು ಅಲ್ಲಗಳೆಯಲಾಗದು. ಸಮೀಕ್ಷೆಯಲ್ಲಿ ಎತ್ತಲಾಗಿರುವ ಪ್ರಶ್ನೆಗಳನ್ನು ನೋಡಿದರೆ ಅದು ವ್ಯಕ್ತಿಯೊಬ್ಬರ ವಿವರವಲ್ಲದೆ ಬೇರೇನೂ ಅಲ್ಲ. ಇಂತಹ ಸಮೀಕ್ಷೆಗೆ ಅವಕಾಶವಿಲ್ಲ ಎಂದು ಆಕ್ಷೇಪಿಸಿದರು.2015ರಲ್ಲಿ ರಾಜ್ಯ ಸರ್ಕಾರ ಮಾಡಿದ ಸಮೀಕ್ಷೆಯನ್ನೂ ಪ್ರಶ್ನಿಸಲಾಗಿತ್ತು. 2024ರಲ್ಲಿ ಸಲ್ಲಿಸಿದ ಆಯೋಗ ಸಲ್ಲಿಸಿದ ಸಮೀಕ್ಷೆಯ ವರದಿ ಸ್ಥಿತಿ-ಗತಿ ಏನಾಗಿದೆ ಎಂಬುದೇ ತಿಳಿದಿಲ್ಲ. ಹಿಂದೆ ನಡೆಸಿದ ಸಮೀಕ್ಷೆಗೆ 150 ಕೋಟಿ ರು. ವ್ಯಯಿಸಲಾಗಿತ್ತು. ಈಗ ಮತ್ತೆ 420 ಕೋಟಿ ವ್ಯಯಿಸಲಾಗುತ್ತಿದೆ. ಹೊಸ ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿಸಿದೆ. 1,561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದೆ. ಹಲವು ಜಾತಿಗಳನ್ನು ಧರ್ಮದೊಂದಿಗೆ ತಳುಕು ಹಾಕಲಾಗಿದೆ. ಹೊಸ ಪಟ್ಟಿಯಲ್ಲಿ ಅವೈಜ್ಞಾನಿಕ ಗುಂಪು ಸೃಷ್ಟಿಸಲಾಗಿದೆ. ಕೃತಕವಾಗಿ ಜಾತಿಗಳನ್ನು ಸೃಷ್ಟಿ ಮಾಡಲಾಗಿದ್ದು, ಇದರಲ್ಲಿ ವಿವೇಚನೆ ಬಳಕೆ ಮಾಡಲಾಗಿಲ್ಲ. ಪ್ರಮುಖವಾಗಿ ದತ್ತಾಂಶವನ್ನು ಅಸ್ತ್ರವಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ಅರ್ಜಿದಾರ ಪರ ವಕೀಲರು ಆರೋಪಿಸಿದರು.