ಜಿಎಸ್‌ಟಿ 2.0 ಜನಸ್ನೇಹಿ: ಬಿವೈಆರ್‌

KannadaprabhaNewsNetwork |  
Published : Sep 24, 2025, 01:00 AM IST
ತೀರ್ಥಹಳ್ಳಿಯ ಗ್ರಾಮೀಣಸೌಧದಲ್ಲಿ ಜಿಎಸ್‌ಟಿ ತೆರಿಗೆಯ ಕುರಿತು  ವರ್ತಕರೊಂದಿಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಶಾಸಕ ಆರಗ ಜ್ಞಾನೇಂದ್ರ, ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಇದ್ದರು. | Kannada Prabha

ಸಾರಾಂಶ

ಸೆ.೨೨ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ೨.೦ ಜನಸ್ನೇಹಿಯಾಗಿದ್ದು ಉಳಿತಾಯ ಉತ್ಸವವಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯೂ ಹೆಚ್ಚಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತೀರ್ಥಹಳ್ಳಿ: ಸೆ.೨೨ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ೨.೦ ಜನಸ್ನೇಹಿಯಾಗಿದ್ದು ಉಳಿತಾಯ ಉತ್ಸವವಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯೂ ಹೆಚ್ಚಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೇಂದ್ರ ಸರ್ಕಾರದ ಜಿಎಸ್‌ಟಿ ತೆರಿಗೆಯ ಬಗ್ಗೆ ಮಂಗಳವಾರ ಸಂಜೆ ಪಟ್ಟಣದ ಗ್ರಾಮೀಣಸೌಧದಲ್ಲಿ ನಡೆದ ತೀರ್ಥಹಳ್ಳಿಯ ವರ್ತಕ ಬಂಧುಗಳೊಂದಿಗೆ ಮಾಹಿತಿ ಕಾರ್ಯಕ್ರಮದಲ್ಲಿ ವರ್ತಕರ ಸಮಸ್ಯೆ ಮತ್ತು ಪ್ರಶ್ನೆಗಳನ್ನು ಆಲಿಸಿ ಅವರು ಮಾತನಾಡಿದರು.

ಜಿಎಸ್‌ಟಿ ೨.೦ ಬಂದಿರುವ ಹಿನ್ನೆಲೆಯಲ್ಲಿ ೨.೮೬ ಸಾವಿರ ಕೋಟಿ ರು. ಹಣ ಸರ್ಕಾರದ ಬೊಕ್ಕಸದ ಬದಲಿಗೆ ಜನರ ಜೇಬಿಗೆ ಸೇರಲಿದೆ. ರಾಜ್ಯ ಸರ್ಕಾರಗಳು ಇದನ್ನು ಸರಿದೂಗಿಸಿಕೊಳ್ಳುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ವರ್ತಕರು ಪಾರದರ್ಶಕ ವ್ಯವಹಾರ ನಡೆಸುವ ಅಗತ್ಯವಿದೆ. ಆ ಮೂಲಕ ಕ್ರಮಬದ್ಧವಾಗಿ ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕಿದೆ. ತೆರಿಗೆ ಕದಿಯುವ ಪ್ರಯತ್ನಕ್ಕೆ ಮುಂದೆ ತಡೆಯೂ ಬೀಳಲಿದೆ ಎಂದು ತಿಳಿಸಿದರು.

ಒಂದು ದೇಶ ಒಂದು ತೆರಿಗೆ ಆಧಾರದಲ್ಲಿ ಬಂದಿರುವ ಜಿಎಸ್‌ಟಿ ಜಾರಿಗೆ ಮುನ್ನ ದೇಶದಲ್ಲಿ ದೋ ನಂಬರ್ ದಂಧೆ ನಡೆಯುತ್ತಿತ್ತು. ತೆರಿಗೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ಇದು ಅನಿವಾರ್ಯವೂ ಆಗಿತ್ತು. ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಭರವಸೆಯಂತೆ ೩೭೫ ವಸ್ತುಗಳಿಗೆ ೪ ರಿಂದ ೨ ಹಂತದ ತೆರಿಗೆಯನ್ನು ಶೇ ೫% ನಿಂದ ೦% ಇಳಿಕೆ ಮಾಡಿದ್ದಾರೆ. ತಂಬಾಕು ಉತ್ಪನ್ನಗಳಿಗೆ ಮಾತ್ರ ಹೆಚ್ಚಿನ ಟ್ಯಾಕ್ಸ್ ವಿಧಿಸಲಾಗಿದೆ ಎಂದು ಹೇಳಿದರು.

ಮಲೆನಾಡಿನ ಆರ್ಥಿಕ ವ್ಯವಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈಲು ಮಾರ್ಗದ ವಿಸ್ತರಣೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ತ್ವರಿತವಾಗಿ ಚಿಂತನೆ ನಡೆಸಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ದಾಖಲೆ ಕಾರ್ಯವಾಗಿದ್ದು, ಗ್ರಾಹಕರಿಗೆ ಜೇನು ಹೂವಿನ ಮಕರಂದ ಹೀರುವಂತಿದೆ. ಈ ದೇಶದ ಇತಿಹಾಸದಲ್ಲಿ ಒಮ್ಮೆ ನಿಗದಿ ಪಡಿಸಿದ ತೆರಿಗೆಯನ್ನು ಇಳಿಸಿದ ಉದಾಹರಣೆ ಇಲ್ಲ. ಇದರಿಂದ ದಿನಬಳಕೆ ವಸ್ತುಗಳ ಖರೀದಿ ಸೇರಿದಂತೆ ಶ್ರೀ ಸಾಮಾನ್ಯರ ಬದುಕಿಗೆ ಪೂರಕವಾಗಿದೆ ಎಂದರು.

ವೇದಿಕೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಇದ್ದರು. ವರ್ತಕರ ಸಂಘದ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ ಸ್ವಾಗತಿಸಿದರು. ಪಪಂ ಸದಸ್ಯ ಸಂದೇಶ್ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊದಲ ಬಸವರಾಜ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ