ಅಡಕೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲು

KannadaprabhaNewsNetwork |  
Published : Sep 24, 2025, 01:00 AM IST
2 | Kannada Prabha

ಸಾರಾಂಶ

ಹಿರಿಯೂರಿನ ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಡಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಶೇ.79ರಷ್ಟು ಅಡಕೆ ಬೆಳೆ ಬೆಳೆಯುತ್ತಿದ್ದು ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜ್ ಅಡಿವಪ್ಪರ್ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಅಡಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಡಕೆ ಬೆಳೆಗೆ ನೀರು ಬಸಿದು ಹೋಗುವ ಕೆಂಪು ಮಣ್ಣು ಸೂಕ್ತವಾಗಿದ್ದು, ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಕೆಗೆ ಸೂಕ್ತವಲ್ಲ. ಅಡಕೆಯಲ್ಲಿ ಅಂತರ ಬೆಳೆಯಾಗಿ ಬಾಳೆ, ವೀಳ್ಯೆದೆಳೆ, ಜಾಯಿಕಾಯಿ, ಅರಿಶಿಣ ಮತ್ತು ಕರಿಮೆಣಸು ಚಿತ್ರದುರ್ಗ ಜಿಲ್ಲೆಗೆ ಸೂಕ್ತವಾಗಿದೆ ಎಂದರು.

ತೋಟಗಾರಿಕೆ ತಜ್ಞ ಡಾ.ಸುದೀಪ್ ಮಾತನಾಡಿ, ಅಡಕೆಯ ವಿವಿಧ ತಳಿಗಳು ಮತ್ತು ವಿಶೇಷತೆ ಗುಣಗಳು, ಸಸ್ಯಾಭಿವೃದ್ಧಿಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ಹಸಿರೆಲೆ ಗೊಬ್ಬರದ ನಿರ್ವಹಣೆ ಹಾಗೂ ನೀರು ಮತ್ತು ಬಸಿಗಾಲುವೆಯ ನಿರ್ವಹಣೆ ಕುರಿತು ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರು ಅಡಕೆಯನ್ನು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದು, ಈ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉತ್ತಮ ತಳಿಗಳ ಆಯ್ಕೆ, ಬೇಸಾಯ ಕ್ರಮ, ಫೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆಯ ತಾಂತ್ರಿಕ ಮಾಹಿತಿ ಅಗತ್ಯವಿದೆ. ಇದಲ್ಲದೆ ರೈತರಿಗೆ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಮಾಡುವ ವಿಧಾನದ ಮಾಹಿತಿಯೊಂದಿಗೆ ಪ್ತಾತ್ಯಕ್ಷಿಕೆ ಮಾಡುವುದು ಸಹ ಈ ತರಬೇತಿಯ ಪ್ರಮುಖ ವಿಷಯವಾಗಿದ್ದು ಇದರಿಂದ ಅಡಕೆ ಸಿಪ್ಪೆಯನ್ನು ಎಲ್ಲೆಂದರಲ್ಲೆ ಬಿಸಾಕುವುದು ಹಾಗೂ ಇದರಿಂದಾಗುವ ಅವಘಡಗಳನ್ನು ತಪ್ಪಿಸಲು ಮತ್ತು ರೈತರು ಸ್ವತಃ ತಮ್ಮ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದಾಗಿರುವುದರಿಂದ ಈ ತರಬೇತಿಯು ಸಹಕಾರಿಯಾಗಲಿದೆ ಎಂದರು.

ಕೀಟಶಾಸ್ತ್ರ ತಜ್ಞೆ ಡಾ.ಸ್ವಾತಿ ಅವರು, ಪ್ರಮುಖ ಕೀಟಗಳಾದ ನುಸಿ, ರುಗೋಸ್ ಸುರಳಿ ಸುತ್ತುವ ಬಿಳಿನೊಣ, ಸುಳಿ ತಿಗಣೆ, ಹಿಂಗಾರು ತಿನ್ನುವ ಹುಳುಗಳ ಹಾನಿಯ ಲಕ್ಷಣ ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸುವ ವಿಧಾನದ ಕುರಿತು ವಿಷಯ ಮಂಡನೆ ಮಾಡಿದರು. ತದನಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ರೈತರಿಗೆ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಈ ಸಂದರ್ಭದಲ್ಲಿ ರೈತರಾದ ಕುರಿಕೆಂಪನಹಳ್ಳಿ ಹಫಿಜ್ ಉಲ್ಲಾಖಾನ್, ಮಷಣಾಪುರ ಮೃತ್ಯುಂಜಯಪ್ಪ, ಚನ್ನಕೇಶವಸ್ವಾಮಿ, ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿನ ತಾಂತ್ರಿಕ ಮುಖ್ಯಸ್ಥ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚು ಆಸಕ್ತ ರೈತರು ಆಗಮಿಸಿದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ