ಕನ್ನಡಪ್ರಭ ವಾರ್ತೆ, ಯಳಂದೂರುನಾನು ಸದನದಲ್ಲಿ ಕೊಳ್ಳೇಗಾಲ ನಗರ ಸಭೆಯಲ್ಲಿ ಕೆಲ ಪೌರ ಕಾರ್ಮಿಕರನ್ನು ಕಾಯಂ ಮಾಡಿ ಅವರಿಗೆ ನೇರ ನೇಮಕಾತಿಗೆ ಅನುಮತಿ ನೀಡಬೇಕೆಂದು ಪ್ರಶ್ನಿಸಿದ್ದೆ. ಸರ್ಕಾರ ಸ್ಪಂದಿಸಿ ರಾಜ್ಯದ ಎಲ್ಲಾ ನಗರ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಕೆಯೂ ಸೇರಿದಂತೆ ೨೧೨೭ ಮಂದಿಗೆ ನೇರ ನೇಮಕಾತಿಗೆ ಆದೇಶ ನೀಡಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ರಹೀಂಖಾನ್, ಹಾಗೂ ಭೈರತಿ ಸುರೇಶ್‌ರವರು ಇದನ್ನು ಪರಿಗಣಿಸಿ ಪೌರಾಡಳಿತ ನಿರ್ದೇಶನಾಲಯದ ಮೂಲಕ ಆದೇಶ ನೀಡಿದ್ದಾರೆ. ಇದರಿಂದ ನನ್ನ ಕ್ಷೇತ್ರದ ಕೊಳ್ಳೇಗಾಲ ನಗರ ಸಭೆಯ ೨೪ ಮಂದಿ ಹಾಗೂ ಯಳಂದೂರು ಪಟ್ಟಣ ಪಂಚಾಯಿತಿಯ ೩ ಮಂದಿ ಸೇರಿದಂತೆ ನಗರ, ಪುರಸಭೆ, ಪಟ್ಟಣ ಪಂಚಾಯಿತಿಗಳ ೧೧೦೦ ಮಂದಿ, ಮಹಾನಗರ ಪಾಲಿಕೆಯ ೩೨೭ ಮಂದಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೭೦೦ ಮಂದಿ ಪೌರ ಕಾರ್ಮಿಕರಿಗೆ ಅನುಕೂಲವಾಗಿದೆ.
ನಮ್ಮ ಗ್ರಾಮ, ಪಟ್ಟಣ, ನಗರ, ರಾಜ್ಯ ದೇಶ ಸ್ವಚ್ಛವಾಗಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇದು ನನಸಾಗಲು ಪೌರ ಕಾರ್ಮಿಕರು ದಿನನಿತ್ಯ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಪೌರ ಕಾರ್ಮಿಕರು ಸ್ವಚ್ಛತೆಯ ಸೈನಿಕರು. ಇವರೊಂದಿಗೆ ಪ್ರತಿ ನಾಗಕರಿಕರು ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿ, ಇದನ್ನು ಒಣ ಹಾಗೂ ಹಸಿಯಾಗಿ ಬೇರ್ಪಡಿಸಿ, ಎಲ್ಲೆಂದರಲ್ಲಿ ಕಸವನ್ನು ಬೀಸಾಡದೆ ಸಂಬಂಧಪಟ್ಟ ವಾಹನಕ್ಕೆ ನೀಡುವ ಮೂಲಕ ಪೌರ ಕಾರ್ಮಿಕರಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆಯನ್ನು ನೀಡಿ ಅವರಿಗೆ ಪೇಟ ತೊಡಿಸಿ ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಸವಿತಾ ಬಸವರಾಜು, ಮಹದೇವ, ಮಂಜು, ಪ್ರಭಾವತಿರಾಜಶೇಖರ್, ಬಿ. ರವಿ, ಸುಶೀಲಾಪ್ರಕಾಶ್ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್‌ಬೇಗ್ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಆರೋಗ್ಯ ನಿರೀಕ್ಷಕ ರಘು, ಗುತ್ತಿಗೆದಾರ ರಮೇಶ್, ಮಲ್ಲಿಕಾರ್ಜುನ, ರಘು ಸೇರಿದಂತೆ ಅನೇಕರು ಇದ್ದರು.