ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿರುವ ಒಟ್ಟು ೫,೯೪೭ ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ೨೭೪ ಗ್ರಾಮ ಪಂಚಾಯಿತಿಗಳು ಮಾತ್ರ ಸಿಬ್ಬಂದಿಗೆ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸಿವೆ. ಉಳಿದ ೫೬೭೩ ಗ್ರಾಪಂಗಳು ೧೭ ವರ್ಷದಿಂದ ಸಿಬ್ಬಂದಿಯನ್ನು ಭವಿಷ್ಯನಿಧಿಯಿಂದ ವಂಚಿಸಿರುವುದನ್ನು ಸರ್ಕಾರವೇ ಒಪ್ಪಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.
ಬೆಂಗಳೂರು ನಗರದ ೮೫ ಗ್ರಾಪಂಗಳ ಪೈಕಿ ೫೨ ಗ್ರಾಪಂಗಳು, ದಕ್ಷಿಣ ಕನ್ನಡ ಜಿಲ್ಲೆಯ ೨೨೩ ಗ್ರಾಪಂಗಳ ಪೈಕಿ ೫೭ ಗ್ರಾಪಂಗಳು ಹಾಗೂ ಉಡುಪಿ ಜಿಲ್ಲೆಯ ೧೫೫ ಗ್ರಾಮ ಪಂಚಾಯಿತಿಗಳೂ ಗ್ರಾಪಂ ಸಿಬ್ಬಂದಿಗೆ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಿರುವುದು ಅಂಕಿ- ಅಂಶಗಳಿಂದ ತಿಳಿದುಬಂದಿದೆ.ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಭವಿಷ್ಯನಿಧಿ ಸೌಲಭ್ಯವನ್ನು ಅನುಷ್ಠಾನಗೊಳಿಸದೆ ಬಾಕಿ ಇರುವುದು ಸರ್ಕಾರದ ಗಮನದಲ್ಲಿದ್ದು, ಭವಿಷ್ಯನಿಧಿ ಸೌಲಭ್ಯವನ್ನು ಎಲ್ಲಾ ಗ್ರಾಪಂ ಸಿಬ್ಬಂದಿಗೆ ಒದಗಿಸಲು ಸರ್ಕಾರದಿಂದ ನಿರ್ದೇಶನ ನೀಡಿರುವುದಾಗಿ ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ.
ಸಚಿವರ ನಿರ್ದೇಶನದನ್ವಯ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತರಾದ ಅರುಂಧತಿ ಅವರು ಗ್ರಾಪಂ ಸಿಬ್ಬಂದಿಗೆ ಭವಿಷ್ಯನಿಧಿಯನ್ನು ಒದಗಿಸುವ ಕುರಿತು ೧೫ ದಿನಗಳೊಳಗೆ ಕ್ರಮವಹಿಸಿ ಆಯುಕ್ತಾಲಯಕ್ಕೆ ಮಾಹಿತಿ ನೀಡುವಂತೆ ಹಾಗೂ ಈ ವಿಷಯವನ್ನು ಜಿಲ್ಲಾ ಪಂಚಾಯಿತಿ ಹಂತದಿಂದ ಮೇಲ್ವಿಚಾರಣೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಮುಖೇನ ಸೂಚಿಸಿದ್ದಾರೆ.ಗ್ರಾಪಂ ಸಿಬ್ಬಂದಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸುವಂತೆ ೩೧ ಅಕ್ಟೋಬರ್ ೨೦೦೮ರಲ್ಲಿ ಸರ್ಕಾರ ಆದೇಶ ಹೊರಡಿಸಿ ಗ್ರಾಪಂ ಸಿಬ್ಬಂದಿ ತಾವು ಪಡೆಯುತ್ತಿರುವ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆಯ ಶೇ.೧೦ರಷ್ಟು ವಂತಿಗೆಯನ್ನು ಪ್ರತಿ ತಿಂಗಳು ಪಾವತಿ ಮಾಡತಕ್ಕದ್ದು ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಪ್ರತಿ ತಿಂಗಳು ನೌಕರರ ವಂತಿಗೆಗೆ ಸಮಾನ ವಂತಿಗೆಯನ್ನು ಪಾವತಿಸುವಂತೆ ಆದೇಶ ಹೊರಡಿಸಿತ್ತು.
ಆದರೆ, ಈ ಆದೇಶವನ್ನು ಕಳೆದ ೧೭ ವರ್ಷಗಳಲ್ಲಿ ೨೭೫ ಗ್ರಾಪಂಗಳು ಮಾತ್ರ ಜಾರಿಗೊಳಿಸಿವೆ. ಅದರಲ್ಲೂ ಉಡುಪಿ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಗ್ರಾಪಂ ನೌಕರರಿಗೆ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಉಳಿದಂತೆ ಪರಿಪೂರ್ಣವಾಗಿ ರಾಜ್ಯದ ಯಾವ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸದೆ ಸಿಬ್ಬಂದಿಯನ್ನು ವಂಚಿತರನ್ನಾಗಿ ಮಾಡಿವೆ.ಕಳೆದ ೧೭ ವರ್ಷಗಳಲ್ಲಿ ಅದೆಷ್ಟೋ ಗ್ರಾಪಂ ಸಿಬ್ಬಂದಿ ನಿವೃತ್ತರಾಗಿದ್ದಾರೆ, ಮರಣಹೊಂದಿದ್ದಾರೆ. ಸರ್ಕಾರದ ಆದೇಶವಿದ್ದರೂ ಸಾವಿರಾರು ಗ್ರಾಪಂ ಸಿಬ್ಬಂದಿಯನ್ನು ಈ ಸೌಲಭ್ಯದಿಂದ ಹೊರಗಿಡಲಾಗಿದೆ. ಭವಿಷ್ಯನಿಧಿ ಯೋಜನೆಯಿಂದ ವಂಚಿತರಾಗಿದ್ದಾರೆ. ಇದುವರೆಗೆ ಅಧಿಕಾರಕ್ಕೆ ಬಂದ ಯಾವುದೇ ರಾಜಕೀಯ ಪಕ್ಷಗಳೂ ಭವಿಷ್ಯನಿಧಿ ಯೋಜನೆಯನ್ನು ಗ್ರಾಪಂ ಸಿಬ್ಬಂದಿಗೆ ದೊರಕಿಸಿಕೊಡುವ ಕಾರ್ಯಕ್ಕೆ ಮುಂದಾಗದಿರುವುದು ದುರ್ದೈವದ ಸಂಗತಿಯಾಗಿದೆ.
ಇದೀಗ ವಿಧಾನಪರಿಷತ್ ಶಾಸಕ ಮಧು ಜಿ.ಮಾದೇಗೌಡ ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ೩೧ ಅಕ್ಟೋಬರ್ ೨೦೦೮ರ ಆದೇಶದನ್ವಯ ರಾಜ್ಯದಲ್ಲಿನ ಎಲ್ಲಾ ಗ್ರಾಪಂ ಸಿಬ್ಬಂದಿಗೆ ಭವಿಷ್ಯನಿಧಿ ಸೌಲಭ್ಯವನ್ನು ೧ ನವೆಂಬರ್ ೨೦೦೮ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಉಡುಪಿ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೆಲವು ಗ್ರಾಪಂಗಳು ಯೋಜನೆಯನ್ನು ಜಾರಿಗೆ ತಂದಿವೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಭವಿಷ್ಯನಿಧಿ ಯೋಜನೆ ಅನುಷ್ಠಾನ ಬಾಕಿ ಇದೆ. ರಾಜ್ಯದ ಎಲ್ಲಾ ಗಾಪಂಗಳ ಸಿಬ್ಬಂದಿಗೆ ಭವಿಷ್ಯನಿಧಿ ಸೌಲಭ್ಯ ಒದಗಿಸಲು ಸರ್ಕಾರದಿಂದ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.