ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಶಾಸಕ ಕೆ.ಎಸ್.ಬಸವಂತಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ದಾವಣಗೆರೆಗಾಂಧೀಜಿಯವರ ಕನಸು ಸ್ವಚ್ಛ ಭಾರತವಾಗಿದ್ದು ಪ್ರಾಮಾಣಿಕವಾಗಿ ಇದನ್ನು ಅನುಷ್ಠಾನ ಮಾಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಲಾದ ಮಹಾತ್ಮ ಗಾಂಧಿ 154 ನೇ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವ ರೀತಿ ದಿನನಿತ್ಯ ನಗರದ ಸ್ವಚ್ಛತೆ ಕೈಗೊಳ್ಳಲಾಗುತ್ತದೆ, ಅದೇ ಮಾದರಿಯಲ್ಲಿ ಗ್ರಾಮಾಂತರ ಪ್ರದೇಶ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಾಗಬೇಕು. ಗಾಂಧೀಜಿಯಂತೆ ಎಲ್ಲರಿಗೂ ಮಹಾತ್ಮರಾಗಲು ಸಾಧ್ಯವಿಲ್ಲ, ಗಾಂಧೀಜಿಯವರ ಮಾತ್ರ ಈ ಸ್ಥಾನದಲ್ಲಿ ನೋಡಲು ಸಾಧ್ಯ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಗೃಹ, ರೈಲ್ವೆ ಸಚಿವರಾಗಿ ನಂತರ ದೇಶದ ಎರಡನೇ ಪ್ರಧಾನಿಯಾಗಿ ದಕ್ಷ, ಪ್ರಾಮಾಣಿಕತೆಯಿಂದ ಆಡಳಿತ ನಡೆಸಿದರು ಎಂದರು.ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಗಾಂಧೀಜಿ, ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚರಕದಲ್ಲಿ ನೂಲುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ತಮ್ಮ ಬದುಕನ್ನೆ ಮುಡುಪಾಗಿಟ್ಟವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರಾಗಿದ್ದು, ಸರ್ವಧರ್ಮ ಸಮಾನತೆ ಸಂದೇಶ ದೇಶಕ್ಕೆ ನೀಡಿದ್ದಾರೆ. ಗಾಂಧಿ ಕೇವಲ ಭಾರತಕ್ಕಲ್ಲಾ ವಿಶ್ವ ಕಂಡ ಶಾಂತಿಧೂತರು ಎಂದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಗಾಂಧಿ ಮತ್ತು ಶಾಸ್ತ್ರೀಜಿ ಕುರಿತು ಉಪನ್ಯಾಸ ನೀಡಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಸತ್ಯ, ಅಹಿಂಸೆ, ಉಪವಾಸ ಚಳವಳಿಗಳೇ ಗಾಂಧೀಜಿಗೆ ಪ್ರಬಲ ಅಸ್ತ್ರವಾಗಿದ್ದವು. ಸ್ವದೇಶಿ ವಸ್ತುಗಳ ಬಳಕೆಯಿಂದಲೇ ದೇಶ ಸ್ವಾವಲಂಬಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದ್ದ ಗಾಂಧೀಜಿ, ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಸಾರಿದ್ದರು. ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಸಂದೇಶ ನೀಡಿದವರಾಗಿದ್ದು ದೇಶ ಕಂಡ ದಕ್ಷ, ಪ್ರಾಮಾಣಿಕ ಪ್ರಧಾನಿ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಂದೇಶವನ್ನು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸಂದೇಶ ತಿಳಿಸಿ ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿರುವ ಗಾಂಧೀಜಿ ಇಡೀ ವಿಶ್ವಕ್ಕೆ ಆದರ್ಶ ಪ್ರಾಯರು. ಗಾಂಧೀಜಿ ಹಾಕಿಕೊಟ್ಟ ಹಾದಿಯಲ್ಲಿಯೇ ನಾವೆಲ್ಲರೂ ಸಾಗೋಣ ಎಂದು ಸಂದೇಶ ವಾಚಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ವಿನಾಯಕ್ ಪೈಲ್ವನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಪಾಲಿಕೆ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ಪಾಲಿಕೆ ಸದ್ಯಸರಾದ ಎಚ್.ನಾಗರಾಜ್, ಪಾಮೇನಹಳ್ಳಿ ನಾಗರಾಜ್, ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಸ್ವಾಗತಿಸಿದರು. ಪೊಲೀಸ್ ಇಲಾಖೆ ದೇವರಾಜ್ ಮತ್ತು ಶೈಲಜಾ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವಂದಿಸಿದರು. ವಿದ್ಯಾರ್ಥಿಗಳಿಂದ ಧರ್ಮಗ್ರಂಥಗಳ ಪಠಣಅಜಯ್ ನಾರಾಯಣ ಮತ್ತು ಸಂಗಡಿಗರು ರಘುಪತಿ ರಾಜಾರಾಂ ಸೇರಿ ಗಾಂಧಿ ಪ್ರಿಯ ಗೀತೆಗಳ ಹಾಡಿದರು. ಸಿದ್ದಗಂಗಾ ಶಾಲೆಯ ಎನ್.ಎಸ್.ನಯನಾ, ಕೆ.ಎಂ.ಸಿಂಚನಾ, ಗೀತಾ ಪಠಣ, ಡಿ. ರಿದಾ ಮತ್ತು ಮಷ್ಕುರಾ ಖಾನಂ ಕುರಾನ್‌ನ ಪಠಣ ಹಾಗೂ ಸ್ತುತಿ ಬೈಬಲ್ ಪಠಣ ಮಾಡಿದರು. ಪ್ರೌಢಶಾಲಾ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು, ಪ್ರಮಾಣ ಪತ್ರಗಳ ವಿತರಿಸಲಾಯಿತು.