ರಾಯಚೂರು: ಕಾಂಗ್ರೆಸ್ ಸಮುದ್ರವಿದ್ದಂತೆ. ಯಾರೇ ಪಕ್ಷಕ್ಕೆ ಬಂದರೂ ಅವರನ್ನು ಸ್ವಾಗತಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವ ವಿಚಾರವಾಗಿ ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಸಿ.ಎಂ. ಇಬ್ರಾಹಿಂ ಹಿರಿಯರು, ಉತ್ತಮ ನಾಯಕರೂ ಆಗಿದ್ದು, ಹಿಂದೆ ಕೇಂದ್ರ ಸಚಿವರಾಗಿಯೂ ಸಹ ಕೆಲಸ ಮಾಡಿದ್ದಾರೆ. ಸೈದ್ಧಾಂತಿಕವಾಗಿ ಕಾಂಗ್ರೆಸ್‌ನಲ್ಲಿದ್ದ ಅವರು ಯಾವುದೋ ಕಾರಣಕ್ಕೆ ಜೆಡಿಎಸ್‌ಗೆ ಹೋಗಿದ್ದರು. ಯಾಕೆ ಹೋಗಿದ್ದರು ಎನ್ನುವುದನ್ನು ಅವರನ್ನೇ ಕೇಳಬೇಕು. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕು ಎಂದರು. ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಡಿಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬೋಸರಾಜು, ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬರಲು ಹೇಳಿಕೆ ನೀಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಯಾರೂ ಹೀಗೆ ಮಾತನಾಡಲ್ಲ. ದೇಶದಲ್ಲಿ ಇರುವರು ಎಲ್ಲರೂ ಕಾಂಗ್ರೆಸ್ ಮುಖಂಡರೆ. ಬರುವರು ಬರುತ್ತಿರುತ್ತಾರೆ. ಹೋಗುವರೂ ಹೋಗುತ್ತಿರುತ್ತಾರೆ. ಮಾತನಾಡುವರು ಮಾತನಾಡುತ್ತಿರುತ್ತಾರೆ. ನಮ್ಮ ಸರ್ಕಾರ ಮಾತ್ರ ಜನಪರವಾಗಿ ಆಡಳಿತ ನಡೆಸುತ್ತದೆ ಎಂದು ಹೇಳಿದರು.