೧೨ ವರ್ಷದಲ್ಲಿ ಪರಿವರ್ತನಾತ್ಮಕ ಯೋಜನೆಗಳು ಜಾರಿ: ಹೆಚ್‌ಡಿಕೆ

KannadaprabhaNewsNetwork |  
Published : Jun 15, 2026, 02:30 AM IST
೧೩ಕೆಎಂಎನ್‌ಡಿ-೬ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ೧೨ ವರ್ಷಗಳನ್ನು ಪೂರೈಸಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುದೀರ್ಘ ಕಾಲ ದೇಶ ಮುನ್ನಡೆಸಿದ ಪ್ರಮುಖ ಚುನಾಯಿತ ಪ್ರಧಾನಿಗಳಲ್ಲಿ ಒಬ್ಬರಾಗಿ ಅವರು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜನಧನ್ ಖಾತೆಗಳನ್ನು ತೆರೆದು ಬ್ಯಾಂಕ್ ವಹಿವಾಟು ಗೊತ್ತಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕು ವಹಿವಾಟಿನ ವ್ಯಾಪ್ತಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ೧೨ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಮನೆಬಾಗಿಲಿಗೆ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.

ಚುನಾಯಿತ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ೧೨ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಗರದ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇರ ನಗದು ವರ್ಗಾವಣೆ, ಯುಪಿಐ ಹಣ ವಹಿವಾಟು ಸೇರಿದಂತೆ ಅನೇಕ ಪರಿವರ್ತನಾತ್ಮಕ ಯೋಜನೆಗಳು ಜಾರಿಗೆ ಬಂದಿವೆ. ಅಲ್ಲದೇ, ಕೇಂದ್ರ ಸರ್ಕಾರದಿಂದ ಜನರಿಗೆ ತಲುಪಬೇಕಾದ ಪ್ರತಿ ಪೈಸೆಯು ಆಯಾ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಇದು ಡಿಜಿಟಲ್ ಇಂಡಿಯಾದ ಶಕ್ತಿ ಎಂದರು.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುದೀರ್ಘ ಕಾಲ ದೇಶ ಮುನ್ನಡೆಸಿದ ಪ್ರಮುಖ ಚುನಾಯಿತ ಪ್ರಧಾನಿಗಳಲ್ಲಿ ಒಬ್ಬರಾಗಿ ಅವರು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜನಧನ್ ಖಾತೆಗಳನ್ನು ತೆರೆದು ಬ್ಯಾಂಕ್ ವಹಿವಾಟು ಗೊತ್ತಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕು ವಹಿವಾಟಿನ ವ್ಯಾಪ್ತಿಗೆ ತರಲಾಯಿತು ಎಂದು ತಿಳಿಸಿದರು.

೨೦೧೪ರಲ್ಲಿ ಸುಮಾರು ೨ ಟ್ರಿಲಿಯನ್ ಇದ್ದ ಭಾರತದ ಆರ್ಥಿಕತೆಯು, ೨೦೨೬ ರ ವೇಳೆಗೆ ಅಂದಾಜು ೪.೨ ಟ್ರಿಲಿಯನ್ ಜಿಡಿಪಿ ತಲುಪುವ ಮೂಲಕ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರಧಾನಿಗಳ ದೂರದೃಷ್ಟಿಯಿಂದ ಸಾಧ್ಯವಾಗಿದೆ. ಭಾರತವು ಈಗ ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ ಎಂದರು.

ಭಾರತದ ಸ್ವದೇಶಿ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ, ದೇಶದ ಮೂಲೆ ಮೂಲೆಗೂ ತಲುಪಿ ನಗದು ರಹಿತ ವಹಿವಾಟಿನಲ್ಲಿ ಜಾಗತಿಕ ದಾಖಲೆ ಬರೆದಿದೆ. ಜನಧನ್ ಯೋಜನೆ ಮೂಲಕ ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದ ಬಡವರಿಗಾಗಿ ೫೫ ಕೋಟಿಗೂ ಹೆಚ್ಚು ಶೂನ್ಯ ಠೇವಣಿ ಖಾತೆಗಳನ್ನು ತೆರೆಯಲಾಗಿದೆ. ಸರ್ಕಾರದ ಸಬ್ಸಿಡಿಗಳು ಮತ್ತು ಕಲ್ಯಾಣ ಯೋಜನೆಗಳ ಹಣವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇದು ಭಾರತದಲ್ಲಿ ಪರಿವರ್ತನಾತ್ಮಕ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಪ್ರತಿಪಾದಿಸಿದರು.

ಸಾಮಾಜಿಕ ಕಲ್ಯಾಣ ಮತ್ತು ಬಡವರ ಕಲ್ಯಾಣ ಯೋಜನೆಗಳ ಜಾರಿಯಲ್ಲಿಯೂ ನರೇಂದ್ರ ಮೋದಿಯವರು ಸದಾ ಮುಂದೆ ಇದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ ೮೧ ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸ್ವಚ್ಛ ಭಾರತ ಅಭಿಯಾನ ಪ್ರಧಾನಿಗಳ ಮಹತ್ವಕಾಂಕ್ಷೆಯ ಯೋಜನೆ ಆಗಿದ್ದು, ಕಳೆದ ೧೨ ವರ್ಷಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ವಿಷಯದಲ್ಲಿ ಗುರುತರವಾದ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ ಎಂದು ಸಚಿವರು ನುಡಿದರು.

ಆಯುಷ್ಮಾನ್ ಭಾರತ್ ಜಗತ್ತಿನ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ. ಇದರಡಿಯಲ್ಲಿ ದೇಶದ ಕೋಟ್ಯಂತರ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗಿದೆ. ಬಡವರು ಬಹು ದೊಡ್ಡ ಪ್ರಮಾಣದಲ್ಲಿ ಈ ವಿಮಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಇದೇ ವೇಳೆ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಟಿ. ಮಂಜು, ಕೆ.ವಿವೇಕಾನಂದ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಕೆ.ಸಿ. ನಾರಾಯಣಗೌಡ, ಮಾಜಿ ಶಾಸಕರಾದ ಕೆ. ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ. ಕೆ. ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಡಾ. ಇಂದ್ರೇಶ್, ಬಿ.ಆರ್. ರಾಮಚಂದ್ರ, ಬಾಲಕೃಷ್ಣ, ಡಿ. ರಮೇಶ್, ಎಸ್.ಪಿ. ಸ್ವಾಮಿ ಇತರರಿದ್ದರು.ಮುನಿಸು ಮರೆತು ಒಂದಾದ ಮೈತ್ರಿ ಪಕ್ಷದ ನಾಯಕರು..!

ಕನ್ನಡಪ್ರಭ ವಾರ್ತೆ ಮಂಡ್ಯಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬೇಡವೇ ಬೇಡ ಎಂದಿದ್ದ ನಾಯಕರು ಒಂದೇ ವೇದಿಕೆಯಲ್ಲಿ ಪರಸ್ಪರ ಅಕ್ಕ-ಪಕ್ಕ ಕುಳಿತು ಖುಷಿಯಿಂದಲೇ ಮಾತುಕತೆಯಲ್ಲಿ ತೊಡಗಿದ್ದು ವಿಶೇಷವೆನಿಸಿತ್ತು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ವರ್ಷ ಸುಧೀರ್ಘ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಕೆ.ಸಿ.ನಾರಾಯಣಗೌಡ ಪರಸ್ಪರ ಅಕ್ಕ-ಪಕ್ಕ ಕುಳಿತು ಮಾತುಕತೆಯಲ್ಲಿ ತೊಡಗಿದ್ದುದು ಕುತೂಹಲ ಕೆರಳಿಸಿತ್ತು.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್‌-ಬಿಜೆಪಿಯವರ ವಿರುದ್ಧ ವಾಗ್ವಾದ ನಡೆದ ಪರಿಣಾಮ ಜೆಡಿಎಸ್‌ ಜೊತೆ ಮೈತ್ರಿಯೇ ಬೇಡ ಎಂದು ಕೆ.ಸಿ.ನಾರಾಯಣಗೌಡರು ಹೇಳಿಕೆ ನೀಡಿದ್ದರು. ಜೆಡಿಎಸ್ ವಿರುದ್ಧ ರಾಜ್ಯ ಬಿಜೆಪಿ ನಾಯಕರಿಗೂ ದೂರು ನೀಡಿದ್ದರು. ಬಿಜೆಪಿ ಮುಖಂಡರ ವಿರುದ್ಧವೂ ಜೆಡಿಎಸ್ ಮುಖಂಡರು ನೇರ ವಾಗ್ದಾಳಿ ನಡೆಸಿದ್ದರು.

ಇದೀಗ ಮುನಿಸು ಮರೆತು ನಾಯಕರು ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದರು. ಕುಮಾರಸ್ವಾಮಿ- ನಾರಾಯಣಗೌಡ ಅಕ್ಕಪಕ್ಕ‌ ಕುಳಿತು ಖುಷಿಯಿಂದಲೇ ಮಾತುಕತೆಯಲ್ಲಿ ತೊಡಗಿದ್ದರು. ಬಿಜೆಪಿಯ ಜಿಲ್ಲಾ ಮುಖಂಡರು ಹಾಗೂ ಜೆಡಿಎಸ್ ಜಿಲ್ಲಾ ಮುಖಂಡರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಿಯಾಗಿ ಕಾಲೇಜು ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ
ಕೇಂದ್ರದ ಬಿಜೆಪಿ ಅಧಿಕಾರದಿಂದ ಯಾರಿಗೂ ನೆಮ್ಮದಿ ಇಲ್ಲ: ಟಿ.ಡಿ.ರಾಜೇಗೌಡ ಟೀಕೆ