ಚಿತ್ರದುರ್ಗ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಬಸವಣ್ಣನವರ ತತ್ವ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿಪಾದಿಸಿದರು.
ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಸರ್ಕಾರ ಬಸವ ತತ್ವಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಬಸವಣ್ಣ ಒಂದು ಜಾತಿಗೆ ಸೀಮಿತರಾದವರಲ್ಲ. ನಾಡಿನ ಎಲ್ಲಾ ವರ್ಗದ ಜನರಿಂದ ಪೂಜನೀಯವಾಗಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರದಿಂದ ಅನುಮೋದಿಸಿದ್ದ ಬಸವಣ್ಣನವರ ಅಧಿಕೃತ ಭಾವಚಿತ್ರದ ಅಡಿಯಲ್ಲಿ ಇನ್ನು ಮುಂದೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಅಡಿ ಬರಹ ಇರಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರದ ಕಡ್ಡಾಯ ಅಳವಡಿಕೆಗೆ ಸೂಚನೆಯನ್ನು ನೀಡಲಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಮಾಜ ಮುಖಂಡರಾದ ಮಹಡಿ ಶಿವಮೂರ್ತಿ, ಮಹೇಶ್, ಕೆಇಬಿ ಷಣ್ಮುಖಪ್ಪ, ದಯಾನಂದ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ರಾಷ್ಟ್ರೀಯ ಬಸವ ದಳ, ಪಂಚಮಸಾಲಿ ಲಿಂಗಾಯಿತ ಮುಖಂಡರು ಉಪಸ್ಥಿತರಿದ್ದರು.