ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರವಾಸೋದ್ಯಮ ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಅನೇಕ ದೇಶಗಳ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಪ್ರವಾಸೋದ್ಯಮ ನಿಧಾನವಾಗಿ ಬದಲಾಗುತ್ತಿದ್ದು, ಈಚೆಗೆ ಜನರು ಸ್ಥಳೀಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದಲ್ಲಿ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಹೇಳಿದರು.ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಕ್ಲಬ್ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರವಾಸಿಗರು ವೈವಿಧ್ಯಮಯ ಪ್ರವಾಸಿ ತಾಣ ವೀಕ್ಷಿಸಲು, ಅನ್ವೇಷಿಸಲು ಬರುತ್ತಾರೆ. ಜಿಲ್ಲೆಯಲ್ಲಿ ಕೋಟೆಗಳು, ಕೆರೆಗಳು, ಜಲಪಾತ, ದೇವಸ್ಥಾನಗಳು ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಉದ್ಯೋಗ ಸೃಜನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಚಾಲನೆ ಶಕ್ತಿಯಾಗಿ ಪ್ರವಾಸೋದ್ಯಮ ಹೆಜ್ಜೆ ಗುರುತು ಮೂಡಿಸಿದೆ ಎಂದರು.
ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ದೇಶಿ ಹಾಗೂ ವಿದೇಶಿ ಪ್ರವಾಸಿಗರಿಗೆ ಸೂಕ್ತ ಸುರಕ್ಷತೆ ಮತ್ತು ಭದ್ರತೆ ವಾತಾವರಣ ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣ ಸೃಷ್ಟಿ ಮಾಡಬೇಕಿದೆ ಎಂದವರು ಹೇಳಿದರು.ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವಿಭಿನ್ನ, ವೈವಿಧ್ಯಮಯ ಪ್ರವಾಸಿ ತಾಣಗಳಿವೆ. ಬೆಟ್ಟ, ಜಲಪಾತ, ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು, ಕೋಟೆಗಳು, ಸಮುದ್ರ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಒಂದು ರಾಜ್ಯ ಹಲವು ಜಗತ್ತು ಎಂಬ ಬರಹ ಕರ್ನಾಟಕ ಪ್ರವಾಸೋದ್ಯಮಕ್ಕೆ ಸರಿಯಾಗಿ ಹೊಂದಾಣಿಕೆಯಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಯುವಕರು ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಭವಿಷ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಯುವಕರಿಗೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ದೇಶದ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ತುಂಬಾ ಮುಖ್ಯವಾದದ್ದು, ಪ್ರವಾಸೋದ್ಯಮದಿಂದ ಆ ಪ್ರದೇಶದ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ನೆರೆಯ ರಾಜ್ಯ ಗೋವಾದಲ್ಲಿ ಪ್ರವಾಸೋದ್ಯಮ ರಾಜ್ಯದ ಆದಾಯದ ಮೂಲವಾಗಿದೆ. ಬೆಳಗಾವಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮ ವಿಭಿನ್ನ ಸಂಸ್ಕೃತಿ ಮತ್ತು ಸ್ಥಳಗಳನ್ನು ಸಂಪರ್ಕಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಹೊಸ ಆಯಾಮ ಪಡೆಯಲಿದೆ ಎಂದು ಹೇಳಿದರು.ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಮಾತನಾಡಿದರು.
ವಸ್ತು ಪ್ರದರ್ಶನ;ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದ ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸೆರೆಹಿಡಿದ ಛಾಯಾಗ್ರಹಣ, ವಿಡಿಯೋ ಲೋಗೋಗಳ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಬಳಿಕ ಶಾಸಕ ಆಸೀಫ್ ಸೇಠ್ ಜಿಲ್ಲೆಯಲ್ಲಿ ತಯಾರಾಗುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ವಿಶೇಷ ತಿಂಡಿ ತಿನಿಸುಗಳ ಮಳಿಗೆ ಉದ್ಘಾಟಿಸಿದರು.
ಅಂಚೆ ರದ್ದತಿ ಬಿಡುಗಡೆ: ಇದಕ್ಕೂ ಮುಂಚೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಆಸೀಫ್ ಸೇಠ್ ಹಾಗೂ ಗಣ್ಯರು, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಬೆಳಗಾವಿ ವಿಭಾಗದಿಂದ ಸುವರ್ಣ ವಿಧಾನ ಸೌಧದ ಚಿತ್ರವಿರುವ ವಿಶೇಷ ಅಂಚೆ ರದ್ದತಿ ಬಿಡುಗಡೆ ಮಾಡಿದರು.ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬಸವರಾಜ ಕುರಿಹುಲಿ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾಡೋಣಿ ಇದ್ದರು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ, ಭಾರತೀಯ ಅಂಚೆ ಇಲಾಖೆ ಸಿಬ್ಬಂದಿ, ವಿವಿಧ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಾ : ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2024ರ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರವಾಸಿ ಜಾಥಾ ಹಮ್ಮಿಕೊಳ್ಳಲಾಯಿತು. ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ, ಉಪ ನಿರ್ದೇಶಕ ಬಸವರಾಜ ಕುರಿಹುಲಿ ಇದ್ದರು. ವಿವಿಧ ಸಂಘ, ಸಂಸ್ಥೆಯವರು, ಹೋಟೆಲ್ ಅಸೋಸಿಯೇಶನ್ಸ್, ಟೂರ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ಪ್ರತಿನಿಧಿಗಳು, ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದರು.