ಜಲಜೀವನ್ ಕಾಮಗಾರಿ ಅಸಮರ್ಪಕ ನಿರ್ವಹಣೆ: ಆಕ್ಷೇಪ

KannadaprabhaNewsNetwork |  
Published : May 28, 2024, 01:02 AM IST
೨೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬೈರೇಗುಡ್ಡ ಬಳಿ ಮುಖ್ಯರಸ್ತೆಯ ಬದಿಯಲ್ಲಿಯೇ ಜಲಜೀವನ್ ಕಾಮಗಾರಿಗಾಗಿ ಪೈಪ್‌ಲೈನ್ ಮಾಡಿರುವುದು. | Kannada Prabha

ಸಾರಾಂಶ

ಬಾಳೆಹೊನ್ನೂರು, ಕೇಂದ್ರ ಸರ್ಕಾರ ಮನೆ ಮನೆಗೂ ನೀರು ತಲುಪಿಸಲು ಆರಂಭಿಸಿರುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಕಾಮಗಾರಿ ಅಸಮರ್ಪಕವಾಗಿರುವ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯೋಜನೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಹಲವೆಡೆ ರಸ್ತೆಬದಿಯಲ್ಲೇ ಪೈಪ್ ಲೈನ್ ನಿರ್ಮಾಣ । ಸಾರ್ವಜನಿಕರ ಆಕ್ರೋಶ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕೇಂದ್ರ ಸರ್ಕಾರ ಮನೆ ಮನೆಗೂ ನೀರು ತಲುಪಿಸಲು ಆರಂಭಿಸಿರುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಕಾಮಗಾರಿ ಅಸಮರ್ಪಕವಾಗಿರುವ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯೋಜನೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ಕಳೆದ ಕೆಲ ದಿನಗಳಿಂದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಜಲಜೀವನ್ ಕಾಮಗಾರಿ ಕೆಲಸದ ಗುತ್ತಿಗೆ ಪಡೆದ ಗುತ್ತಿಗೆದಾರರು ಪೈಪ್‌ಲೈನ್ ನಿರ್ಮಾಣದ ಕಾರ್ಯ ಮಾಡುತ್ತಿದ್ದು, ಇದು ಹಲವು ಕಡೆಗಳಲ್ಲಿ ಅವ್ಯವಸ್ಥೆಯಿಂದ ಕೂಡಿದೆ.ಪಟ್ಟಣದ ಶಾಂತಿನಗರ, ಮಾರಿಗುಡಿ ರಸ್ತೆ, ಪೇಟೆಕೆರೆ, ಸಂತೆ ಮಾರ್ಕೆಟ್, ಕೊಪ್ಪ ರಸ್ತೆ, ಹೊಳೆಬಾಗಿಲು, ಬೈರೇಗುಡ್ಡ ಮುಂತಾದ ಕಡೆಗಳಲ್ಲಿ ಪೈಪ್‌ಲೈನ್‌ಗಾಗಿ ಚರಂಡಿ ತೆಗೆದಿದ್ದು ಸಮರ್ಪಕ ಚರಂಡಿ ತೆಗೆದು ಪೈಪ್‌ಲೈನ್ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಹಲವು ಕಡೆಗಳಲ್ಲಿ ಚರಂಡಿ ತೆಗೆದು ಪೈಪ್ ಹಾಕಿದ ನಂತರ ಸರಿಯಾಗಿ ಮಣ್ಣು ಹಾಕದೇ ಮುಚ್ಚುತ್ತಿದ್ದು, ಇದೀಗ ಮಳೆಯೂ ಆರಂಭಗೊಂಡು ಕೆಲವು ಕಡೆಗಳಲ್ಲಿ ಮಣ್ಣು ಕೊಚ್ಚಿ ಹೋಗಿ ಪೈಪ್‌ಲೈನ್ ಕಾಣುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಮಣ್ಣು ಸರಿ ಯಾಗಿ ಮುಚ್ಚದಿರುವುದರಿಂದ ರಸ್ತೆ ಬದಿಗೆ ಇಳಿದ ವಾಹನಗಳು ಪೈಪ್‌ಲೈನ್‌ನ ಚರಂಡಿಯಲ್ಲಿ ಸಿಲುಕಿಕೊಳ್ಳುತ್ತಿವೆ.ಪಟ್ಟಣದ ಬೈರೇಗುಡ್ಡ, ಹೊಳೆಬಾಗಿಲು, ಕೊಪ್ಪ ರಸ್ತೆಯಲ್ಲಿ ಮುಖ್ಯರಸ್ತೆ ಬದಿಯಲ್ಲಿಯೇ ಪೈಪ್‌ಲೈನ್‌ಗಾಗಿ ಎರಡೂ ಬದಿಯಲ್ಲಿ ಚರಂಡಿ ತೆಗೆದಿದ್ದು, ಇದರಿಂದ ವಾಹನಗಳು ರಸ್ತೆ ಬಿಟ್ಟು ಕೆಳಗೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ತೆಗೆದ ಚರಂಡಿಗೆ ಪೈಪ್‌ಲೈನ್ ಆದ ನಂತರ ಸಮರ್ಪಕ ಮಣ್ಣನ್ನು ಸಹ ಹಾಕಿ ಮುಚ್ಚುತ್ತಿಲ್ಲ.ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮಳೆ ಬರುತ್ತಿರುವುದರಿಂದ ಪೈಪ್‌ಲೈನ್‌ನ ಚರಂಡಿ ಮಣ್ಣು ಕೆಸರುಮಯವಾಗಿದ್ದು, ಬೈಕ್, ಕಾರು ಸೇರಿದಂತೆ ಕೆಲವು ವಾಹನಗಳು ಸಿಲುಕಿದ ಘಟನೆಯೂ ನಡೆದಿದೆ. ಪಾದಚಾರಿಗಳು ಕೆಸರು ತುಂಬಿದ ಮಾರ್ಗದಲ್ಲಿ ನಡೆಯದಂತೆಯೂ ಆಗಿದೆ. ಶಾಂತಿನಗರ, ಪೇಟೆಕೆರೆ, ಮಾರಿಗುಡಿ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಉತ್ತಮ ಕಾಂಕ್ರಿಟ್ ರಸ್ತೆ ಅಗೆದು ಹಾಳುಗೆಡವಿ ಪೈಪ್‌ ಲೈನ್ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೇಟೆಕೆರೆ ಭಾಗದಲ್ಲಿ ಪೈಪ್‌ಲೈನ್‌ಗೆ ತೆಗೆದ ಚರಂಡಿ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿ ಕೆಲವು ಕೃಷಿಕರ ತೋಟ, ಗದೆಯಲ್ಲಿ ನಿಂತಿದೆ. ಕೊಪ್ಪ ರಸ್ತೆಯ ಅರಣ್ಯ ಇಲಾಖೆ ಮುಂಭಾಗದಲ್ಲಿ ಪೈಪ್‌ಲೈನ್‌ಗೆ ಮುಖ್ಯರಸ್ತೆ ಅಗೆದಿದ್ದು, ಅದನ್ನು ಡಾಂಬರ್ ಅಥವಾ ಸಿಮೆಂಟ್ ಹಾಕಿ ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಮುಖ್ಯ ರಸ್ತೆಯಲ್ಲಿ ಇದೀಗ ತೀವ್ರವಾಗಿ ಹೊಂಡ ಬಿದ್ದಿದೆ, ನಿತ್ಯವೂ ಸಾವಿರಾರು ವಾಹನಗಳು ಅಪಘಾತದ ಭಯದಲ್ಲಿಯೇ ತಿರುಗಾಡುವಂತಾಗಿದೆ. ಕೆಲವು ಬೈಕ್ ಸವಾರರು ಗುಂಡಿ ಇರುವುದು ಅರಿಯದೆ ಕೆಳಗೆ ಬಿದ್ದ ಘಟನೆಯೂ ನಡೆದಿದೆ.ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿ ನಿರ್ವಹಣೆಯಾಗಿ, ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ.-- ಕೋಟ್ ೧--

ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಜೆಜೆಎಂ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಮಾಡುತ್ತಿದ್ದು, ಹಲವು ಕಡೆಗಳಲ್ಲಿ ಮುಖ್ಯರಸ್ತೆ ಬದಿಯಲ್ಲೆ ಪೈಪ್‌ಲೈನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆ, ಕಾಂಕ್ರಿಟ್ ರಸ್ತೆ ಕಾಮಗಾರಿಗಳು ನಡೆದರೆ ಪೈಪ್‌ಲೈನ್‌ಗೆ ಹಾನಿಯಾಗಲಿದೆ. ಗುತ್ತಿಗೆದಾರರು ಮುಂದಾಲೋಚನೆ ನಡೆಸದೆ ಕಾಮಗಾರಿ ನಡೆಸಿ ಸರ್ಕಾರದ ಹಣ ಪೋಲು ಮಾಡುತ್ತಿದ್ದಾರೆ. ರಸ್ತೆಯ ಎರಡೂ ಬದಿಯಂಚಲ್ಲಿ ಚರಂಡಿ ತೆಗೆದಿರುವುದರಿಂದ ವಾಹನ ಗಳು ಚರಂಡಿಯಲ್ಲಿ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಗ್ರಾಪಂ, ಸಂಬಂಧಿಸಿದ ಎಂಜಿನಿಯರ್‌ಗಳು ಕಾಮಗಾರಿ ಪರಿಶೀಲಿಸಿ ಸಮರ್ಪಕವಾಗಿ ನಡೆಸಲು ಸೂಚಿಸಬೇಕಿದೆ.- ಮಹಮ್ಮದ್ ಹನೀಫ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ.--

ಬಾಳೆಹೊನ್ನೂರಿನ ವಿವಿಧೆಡೆ ಜಲ ಜೀವನ್ ಮಿಷನ್ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಗೆ ಗುತ್ತಿಗೆದಾರರ ಕರೆಯಿಸಿ ಸಮರ್ಪಕ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಕಾಮಗಾರಿ ನಡೆಸುವಾಗ ಹಾನಿಯಾದ ಕುಡಿಯುವ ನೀರಿನ ಪೈಪ್‌ಲೈನ್, ಮುಖ್ಯರಸ್ತೆ ಹಾನಿ, ಕಾಂಕ್ರಿಟ್ ರಸ್ತೆಗೆ ಹಾನಿಯಾಗಿರುವುದನ್ನು ದುರಸ್ತಿ ಪಡಿಸಿ ಕೊಡುವಂತೆಯೂ ತಿಳಿಸಲಾಗಿದೆ. ಕಾಮಗಾರಿ ಎಲ್ಲೆಲ್ಲಿ ಯಾವ ರೀತಿ ಮಾಡಬೇಕು ಎಂಬುದನ್ನು ಗುತ್ತಿಗೆದಾರರಿಗೆ ತಿಳಿಸಲಾಗಿದೆ.

ಕಾಶಪ್ಪ, ಬಿ.ಕಣಬೂರು ಗ್ರಾಪಂ ಪಿಡಿಒ೨೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬೈರೇಗುಡ್ಡ ಬಳಿ ಮುಖ್ಯರಸ್ತೆಯ ಬದಿಯಲ್ಲಿಯೇ ಜಲಜೀವನ್ ಕಾಮಗಾರಿಗಾಗಿ ಪೈಪ್‌ಲೈನ್ ಮಾಡಿರುವುದು.೨೭ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಕೊಪ್ಪ ರಸ್ತೆಯಲ್ಲಿ ಜೆಜೆಎಂ ಕಾಮಗಾರಿಗಾಗಿ ಮುಖ್ಯರಸ್ತೆ ಅಗೆದು ದುರಸ್ಥಿ ಮಾಡದೇ ಹಾಗೆಯೇ ಬಿಟ್ಟಿರುವುದು.೨೭ಬಿಹೆಚ್‌ಆರ್ ೩: ಶಾಂತಿನಗರದಲ್ಲಿ ಜಲಜೀವನ್ ಕಾಮಗಾರಿಗೆ ಪೈಪ್ ಹಾಕಿ ಮುಚ್ಚಿದ್ದ ಚರಂಡಿಯ ಮಣ್ಣು ಮಳೆಗೆ ತೊಳೆದುಕೊಂಡು ಹೋಗಿರುವುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...