ಸಾಗರ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಸ ಹಾಕದಂತೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲವೆಂದು ಆಡಳಿತ ಮತ್ತು ವಿಪಕ್ಷ ಸದಸ್ಯರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಷಯ ಕುರಿತು ಆಡಳಿತ ಪಕ್ಷದ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿ, ಪಟ್ಟಣದ ಬೇರೆಬೇರೆ ಭಾಗದಲ್ಲಿ ಕಸ ಎಸೆಯುವ ಕಡೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿದ್ದೀರಿ ಎಂದು ನಾಮಫಲಕ ಹಾಕಲಾಗಿದೆ. ಆದರೆ ಜನ ಕಸ ಅಲ್ಲಿಯೆ ಎಸೆದು ಹೋಗುತ್ತಿದ್ದಾರೆ. ಕಸ ಎಸೆಯುವವರ ಬಗ್ಗೆ ಸಿಸಿ ಕ್ಯಾಮೆರದಲ್ಲಿ ತಿಳಿದುಕೊಳ್ಳಲು ಅಸಮರ್ಪಕ ನಿರ್ವಹಣೆಯಿಂದ ಅದು ಕೆಲಸ ಮಾಡುತ್ತಿಲ್ಲ. ಸಿಸಿ ಕ್ಯಾಮೆರಾ ವಾರ್ಷಿಕ ನಿರ್ವಹಣೆಗೆ ಸುಮಾರು ೭ ಲಕ್ಷ ರು. ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೂ ಕಸ ಎಸೆದು ಹೋಗುತ್ತಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನಗರಸಭೆಯ ವಾಣಿಜ್ಯ ಮಳಿಗೆಗಳೂ ನಿರ್ವಹಣೆ ಇಲ್ಲದೆ ಹಾಳು ಬೀಳುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಸಿ.ಸಿ. ಕ್ಯಾಮೆರಾ ಕೆಳಗೆ ಕಸ ಎಸೆದು ಹೋಗಲಾಗುತ್ತಿದೆ. ಪದೇ ಪದೇ ಪೌರಕಾರ್ಮಿಕರನ್ನು ಕರೆದು ಸ್ವಚ್ಛ ಮಾಡಿ ಮತ್ತೆ ಕಸ ಹಾಕಬಾರದು ಎಂದು ಸೆಗಣಿ ಹಾಕಿ ಸ್ಥಳವನ್ನು ಸಾರಿಸಿ ರಂಗೋಲಿ ಸಹ ಹಾಕಿ ಬಂದಿದ್ದೇನೆ. ಆದರೂ ಕಸ ಎಸೆಯುವುದು ನಿಂತಿಲ್ಲ. ಸಿಸಿ ಕ್ಯಾಮೆರಾ ಪ್ರದರ್ಶನಕ್ಕೆ ಹಾಕಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ಕುರಿತು ಮೇಘರಾಜ್, ಶಂಕರ್ ಅಳ್ವಿಕೋಡಿ, ಸರೋಜಮ್ಮ, ಕುಸುಮಾ ಸುಬ್ಬಣ್ಣ, ವಿ.ಮಹೇಶ್, ಟಿ.ಡಿ.ಮೇಘರಾಜ್ ಮಾತನಾಡಿ, ಕಸ ಹಾಕಬಾರದು ಎಂದು ಸಿಸಿ ಕ್ಯಾಮರಾ ಹಾಕಿದೆ. ಆದರೂ ಪ್ರಯೋಜನವಾಗಿಲ್ಲ ಎಂದ ಮೇಲೆ ಕ್ಯಾಮೆರಾ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪೌರಾಯುಕ್ತ ನಾಗಪ್ಪ ಪ್ರತಿಕ್ರಿಯಿಸಿ, ಈಗಾಗಲೇ ಕಸ ಎಸೆದು ಹೋಗುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ವಾಹನಗಳನ್ನೂ ಸೀಜ್ ಮಾಡಿದೆ. ಪಟ್ಟಣದ ೬೩ ಕಡೆಗಳಲ್ಲಿ ಸಿಸಿ ಕ್ಯಾಮರಾ ಹಾಕಿದ್ದು ಇದು ನಗರದ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗಿದೆ. ಕಸ ಎಸೆದು ಹೋಗುವವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಜಾಯಿಸಿ ನೀಡಿದರು.ಸದಸ್ಯ ರವಿ ಲಿಂಗನಮಕ್ಕಿ ಮಾತನಾಡಿ, ನಗರಸಭೆ ಕಸ ಸಂಗ್ರಹಣ ವಾಹನ ರಿಪೇರಿಗೆ ಅತಿಹೆಚ್ಚು ಹಣ ವಿನಿಯೋಗಿಸಲಾಗಿದೆ. ಇದರ ಜೊತೆಗೆ ೧೫ನೇ ಹಣಕಾಸು ಹಣದ ಸುಮಾರು ೭ ಲಕ್ಷ ರು. ಟೆಂಡರ್ ಕರೆಯದೆ ಖರ್ಚು ಮಾಡಲಾಗಿದೆ. ಸಭೆಯಲ್ಲಿ ಸದಸ್ಯರು ಅಭಿಪ್ರಾಯಿಸಿದ್ದನ್ನು ನಡಾವಳಿ ಪುಸ್ತಕದಲ್ಲಿ ಅವರ ಹೆಸರಿನೊಂದಿಗೆ ದಾಖಲಿಸುವ ಕೆಲಸ ನಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಮೈತ್ರಿ ಪಾಟೀಲ್, ಮುಂದಿನ ದಿನಗಳಲ್ಲಿ ನಡಾವಳಿಯಲ್ಲಿ ಸದಸ್ಯರ ಹೆಸರನ್ನು ಸೇರಿಸಲಾಗುತ್ತದೆ. ಸಿಸಿ ಕ್ಯಾಮೆರಾ ಪರಿಣಾಮಕಾರಿ ಕಾರ್ಯನಿರ್ವಹಣೆ ಬಗ್ಗೆ ಗಮನ ಹರಿಸುತ್ತೇವೆ ಎಂದರು.ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಅ.೨೯ಕ್ಕೆ ನಗರಸಭೆ ಅವಧಿ ಕೊನೆಗೊಳ್ಳುತ್ತಿದ್ದು, ಕೆಲವು ಸ್ಥಳೀಯ ಸಂಸ್ಥೆಗಳು ತಮ್ಮ ಅಧಿಕಾರ ಅವಧಿ ಮೊಟಕಾಗಿದ್ದು ಆಡಳಿತಾಧಿಕಾರಿ ನೇಮಕ ಮಾಡದೆ ಚುನಾಯಿತ ಪ್ರತಿನಿಧಿಗಳ ಅವಧಿ ಮುಂದುವರಿಸಿ ಎಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ಸಹ ಆಡಳಿತಾಧಿಕಾರಿಗಳ ನೇಮಕ ಬೇಡ ಎಂದು ಹೇಳಿದೆ. ಸಾಗರ ನಗರಸಭೆಯಲ್ಲಿ ಸಹ ೧೮ ತಿಂಗಳು ಚುನಾಯಿತ ಆಡಳಿತದ ಅವಧಿ ಮೊಟಕಾಗಿದೆ. ಇಲ್ಲಿಯೂ ಕೆಲವು ಸದಸ್ಯರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಳೆಯಿಂದ ನಮ್ಮ ಗತಿ ಏನು, ಸಾಗರ ನಗರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಲಿಖಿತ ಆದೇಶ ಮಾಡಲಿ ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ನಾಗಪ್ಪ, ಸಾಗರ ನಗರಸಭೆ ಆಡಳಿತ ಅವಧಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅ.೨೯ಕ್ಕೆ ಇನ್ನೊಂದು ಸುತ್ತಿನ ವಿಚಾರಣೆ ನಡೆಯಲಿದೆ. ತೀರ್ಪು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಅಧಿಕಾರಿಗಳು ಹಾಜರಿದ್ದರು.