ಬಸವರಾಜ ಸರೂರ
ಬೀದಿದೀಪಗಳ ಕೊರತೆ ಮತ್ತು ನಿರ್ವಹಣೆಯ ಅವ್ಯವಸ್ಥೆಯಿಂದ ನಗರದ ರಸ್ತೆಗಳು, ವೃತ್ತಗಳು ಹಾಗೂ ವಿವಿಧ ವಾರ್ಡ್‌ಗಳಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದು ಪಾದಚಾರಿಗಳು, ಮಹಿಳೆಯರು, ವೃದ್ಧರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರವೆಂಬ ಹೆಗ್ಗಳಿಕೆ ಹೊಂದಿರುವ ರಾಣಿಬೆನ್ನೂರಿನಲ್ಲಿ ಜನಸಂಖ್ಯೆ ಮತ್ತು ವಾಹನ ಸಂಚಾರವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಬೀದಿದೀಪಗಳಂತಹ ಮೂಲಭೂತ ಸೌಕರ್ಯಗಳ ನಿರ್ವಹಣೆ ಜನರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಆದರೆ ಬೀದಿದೀಪಗಳ ನಿರ್ವಹಣೆಗೆ ಲಕ್ಷಾಂತರ ರು. ವ್ಯಯಿಸಿದರೂ ನಗರದ ಹಲವು ಭಾಗಗಳಲ್ಲಿ ಕತ್ತಲೆ ಭಾಗ್ಯ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಹಳೇ ಪಿ.ಬಿ. ರಸ್ತೆ, ಹಳೇ ಮಾಗೋಡ ರಸ್ತೆ, ಹಳೇ ಅಂತರವಳ್ಳಿ ರಸ್ತೆ, ಸಿದ್ದೇಶ್ವರ ನಗರ, ಮಾರುತಿ ನಗರ, ವಿದ್ಯಾನಗರ, ಗೌರಿಶಂಕರ ನಗರ, ಚನ್ನೇಶ್ವರ ನಗರ, ಈಶ್ವರ ನಗರ, ಸಿದ್ಧಾರೂಢ ನಗರ, ಶ್ರೀರಾಮ ನಗರ, ಮೆಡ್ಲೇರಿ ರಸ್ತೆ, ಹುಣಿಸಿಕಟ್ಟಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಹಾಳಾಗಿವೆ. ಕೆಲವು ಕಡೆಗಳಲ್ಲಿ ದೀಪಗಳೇ ಇಲ್ಲದಿರುವುದು ಜನರಿಗೆ ತೊಂದರೆಯಾಗಿದೆ.
₹98 ಲಕ್ಷ ಪ್ರಸ್ತಾವನೆ: ಬೀದಿದೀಪಗಳ ವಾರ್ಷಿಕ ನಿರ್ವಹಣೆಗಾಗಿ ಲಕ್ಷಾಂತರ ರು. ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ನಗರಸಭೆಯಿಂದ ಒಟ್ಟು 7129 ಹೊಸ ದೀಪಗಳ ಅಳವಡಿಕೆಗೆ ₹98 ಲಕ್ಷ ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
ಕತ್ತಲಿನಿಂದ ಕೂಡಿದ ನಿರ್ಜನ ರಸ್ತೆಗಳಲ್ಲಿ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಭೀತಿಯೂ ಜನರನ್ನು ಕಾಡುತ್ತಿದೆ. ಹೀಗಾಗಿ ನಗರಸಭೆಯು ಹೊಸ ದೀಪಗಳ ಅಳವಡಿಕೆಗೆ ವೇಗ ನೀಡುವ ಜತೆಗೆ ಈಗಾಗಲೇ ಇರುವ ದೀಪಗಳ ನಿರಂತರ ನಿರ್ವಹಣೆಗೂ ಆದ್ಯತೆ ನೀಡಬೇಕು. ಪ್ರಮುಖ ರಸ್ತೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ತಕ್ಷಣ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದಲ್ಲಿ ವಿದ್ಯುತ್ ಬೀದಿದೀಪಗಳ ಕೊರತೆ ಬಗ್ಗೆಹರಿಸಲು ಈಗಾಗಲೇ ಸರ್ವೆ ಕಾರ್ಯ ನಡೆಸಿ ಅಂದಾಜು ₹98 ಲಕ್ಷ ವೆಚ್ಚದ ವಿದ್ಯುತ್ ದೀಪಗಳ ಅಳವಡಿಕೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಷ್ಟು ಬೇಗ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು ಎಂದು ರಾಣಿಬೆನ್ನೂರು ನಗರಸಭೆ ಆಯುಕ್ತ ಪಕ್ಕೀರಪ್ಪ ಇಂಗಳಗಿ ಹೇಳಿದರು.