ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು, ಕೃಷಿ ಜೊತೆಗೆ ಹೈನುಗಾರಿಕೆಯ ಕೂಡ ರೈತರು ಅಳವಡಿಸಿಕೊಳ್ಳಬೇಕು.ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ವತಿಯಿಂದ ಪಟ್ಟಣದಲ್ಲಿ ಭಾನುವಾರ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಜಾನುವಾರುಗಳ ಮೇವು ಕತ್ತರಿಸುವ ಯಂತ್ರಗಳ ವಿತರಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ದನ-ಕರು, ಎಮ್ಮೆ ಸಾಕಾಣಿಕೆ ಪ್ರವೃತ್ತಿ ರೈತರಲ್ಲಿ ಕಡಿಮೆಯಾಗುತ್ತಿದೆ ಇದು ಸಲ್ಲದು ಪ್ರತಿಯೊಬ್ಬ ರೈತರೂ ಕೂಡ ದನ, ಕರು, ಎಮ್ಮೆ, ಕುರಿ, ಮೇಕೆ, ಸಾಕಾಣಿಕೆಗೆ ಮುಂದಾಗಬೇಕು. ರೈತರು ಕೇವಲ ಕೃಷಿಯನ್ನೇ ಅವಲಂಬಿಸಿದರೆ ಸಾಲದು, ಹೈನುಗಾರಿಕೆ ವಿಶೇಷವಾಗಿ ರೈತ ಮಹಿಳೆಯವರಿಗೆ ತುಂಬಾ ಸಹಕಾರಿ ಎಂದು ಹೇಳಿದರು.
ಮೇವು ಕತ್ತರಿಸುವ ಯಂತ್ರ ಒಂದಕ್ಕೆ ₹33 ಸಾವಿರ ಬೆಲೆ ಇದ್ದು, ಪಶು ವೈದ್ಯ ಇಲಾಖೆ ವತಿಯಿಂದ ಶೇ. 50ರ ರಿಯಾಯಿತಿ ದರದಲ್ಲಿ ಪೂರೈಸುತ್ತಿದ್ದು ಫಲಾನುಭವಿ ರೈತರು ₹16.5 ಸಾವಿರ ಹಣ ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.ಈ ವರ್ಷ ಒಟ್ಟು 18 ಮಂದಿ ಫಲಾನುಭವಿಗಳಿಗೆ ಈ ಮೇವು ಕತ್ತರಿಸುವ ಯಂತ್ರಗಳು ಮಂಜೂರಾಗಿದ್ದು, ಈ ಪೈಕಿ 8 ಮಂದಿಗೆ ವಿತರಿಸಲಾಗುತ್ತಿದೆ. ಕಮ್ಮಾರಗಟ್ಟೆಯ ಎಂ.ಎಚ್. ಶೇಖರಪ್ಪ, ಗೊಲ್ಲರಹಳ್ಳಿಯ ಹೇಮಾವತಿ, ಯಕ್ಕನಹಳ್ಳಿಯ ದೇವಮ್ಮ, ಹಿರೇಗೊಣಿಗೆರೆಯ ಆಶಾಬಾನು, ಮಾದೇನಹಳ್ಳಿಯ ರಾಮಲಿಂಗಪ್ಪ, ಕೋಣನತಲೆ ಗ್ರಾಮದ ಲೋಕೇಶಪ್ಪ, ಸರಸಗೊಂಡನಹಳ್ಳಿಯ ಎ.ಕೆ.ರಾಮಪ್ಪ, ಚಿಕ್ಕ ಹಾಲಿವಾಣದ ರುದ್ರನಾಯ್ಕ ಈ ಎಂಟು ರೈತ ಫಲಾನುಭವಿಗಳಿಗೆ ಯಂತ್ರಗಳ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಶು ವೈದ್ಯಇಲಾಖೆಯ ಅಧಿಕಾರಿ ಡಾ. ವಿಶ್ವ ನಟೇಶ್, ಪಶು ವೈದ್ಯರಾದ ಚಂದ್ರಶೇಖರ್, ಕಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಡಾ.ಮೇಘನಾ ರಂಗನಾಥ್, ಜಾನುವಾರು ಅಭಿವೃದ್ಧಿ ಅಧಿಕಾರಿ ಹಾಲನಗೌಡ, ಮುಂತಾದವರಿದ್ದರು.