ಸರ್ಕಾರಿ ಶಾಲೆ, ಕಾಲೇಜುಗಳಲ್ಲೀಗ ವ್ಯವಸ್ಥೆಗಳ ಸುಧಾರಣೆ

KannadaprabhaNewsNetwork | Published : Dec 18, 2024 12:46 AM

ಸಾರಾಂಶ

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಭಾಗ್ಯವಂತರು. ಏಕೆಂದರೆ, ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪಕರಿದ್ದಾರೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದ್ದಾರೆ.

- ಕರ್ನಾಟಕ ಪಬ್ಲಿಕ್ ಶಾಲೆ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ. ಮಂಜುನಾಥ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಭಾಗ್ಯವಂತರು. ಏಕೆಂದರೆ, ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪಕರಿದ್ದಾರೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ಸೋಮವಾರ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಾಡಾಗಿದ್ದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಉತ್ತಮ ಗುಣಮಟ್ಟದ ಅಧ್ಯಾಪಕ ವರ್ಗದೊಂದಿಗೆ ಅಗತ್ಯ ಮೂಲಸೌಕರ್ಯಗಳು ಸಹ ಉತ್ತಮವಾಗಿ ಸುಧಾರಣೆಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಎಂದೂ ಕೀಳರಿಮೆ ಇರಬಾರದು. ಬುದ್ಧಿವಂತ ವಿದ್ಯಾರ್ಥಿಗಳನ್ನೇ ಆಯ್ದುಕೊಂಡು ಶೈಕ್ಷಣಿಕ ಸಾಧನೆ ತೋರಿಸುವುದು ದೊಡ್ಡದಲ್ಲ. ಸರ್ಕಾರಿ ಶಾಲಾ- ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಸಾಧನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶೇಷ ಸಾಮರ್ಥ್ಯ ಎಂಬುದು ಇದ್ದೇ ಇರುತ್ತದೆ. ಅಂದಂದಿನ ಪಾಠ ಪ್ರವಚನಗಳನ್ನು ಅಂದಂದೆ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಓದುವ ಅವಶ್ಯಕತೆಯೂ ಬರುವುದಿಲ್ಲ. ಪರೀಕ್ಷೆಯು ಭಯವನ್ನು ಉಂಟು ಮಾಡುವುದಿಲ್ಲ. ಸಂತೋಷದಿಂದ ಪರೀಕ್ಷೆ ಎದುರಿಸಬಹುದು ಎಂದು ತಿಳಿಸಿದರು.

ರಾಜ್ಯದ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ 60 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ 6 ಲಕ್ಷ 31 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಪಿಯುಸಿಯಲ್ಲಿ 6,90,000 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡು 552,000 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತೆಯ ಪ್ರಮಾಣ ಈ ವರ್ಷ ಇನ್ನೂ ಹೆಚ್ಚಾಗಬೇಕು ಎಂದರು.

ಶಾಲೆ ಪ್ರಾಚಾರ್ಯೆ ಬಿ.ಕೆ. ಮಂಜುಳಾ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಶೃತಿ, ಧರ್ಮರಾಜ್ ಇದ್ದರು. ಅಧ್ಯಾಪಕರಾದ ಶಿಲ್ಪಾಚಾರ್ ಹಾಗೂ ಸೌಮ್ಯ ನಿರೂಪಿಸಿದರು. ಉಪ ಪ್ರಾಚಾರ್ಯ ಬೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಪ್ಪ ವಂದಿಸಿದರು.

- - - -16ಕೆಡಿವಿಜಿ41.ಜೆಪಿಜಿ:

ದಾವಣಗೆರೆ ಸಮೀಪದ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

Share this article