- ಉಪಶಮನಾಕಾರಿ ಆರೈಕೆ ಮಾಹಿತಿ ಕಾರ್ಯಕ್ರಮದಲ್ಲಿ ಡಾ. ಎ.ಎಂ. ಶಿಲ್ಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ಯಾಲಿಯೇಟಿವ್ ಕೇರ್ ಎಂಬುದು ಮಾರಣಾಂತಿಕ ರೋಗದಿಂದ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ನೋವು ಕಡಿಮೆ ಮಾಡುವುದು ಮತ್ತು ಜೀವನದ ಗುಣಮಟ್ಟ ಸುಧಾರಿಸಲು ನೀಡುವ ಆರೈಕೆಯಾಗಿದೆ ಎಂದು ಜ.ಜ.ಮು. ವೈದ್ಯಕೀಯ ಕಾಲೇಜಿನ ಅನಸ್ತೇಷಿಯಾ ವಿಭಾಗದ ಪ್ಯಾಲಿಯೇಟಿವ್ ಕೇರ್ ತಜ್ಞೆ ಡಾ. ಎ.ಎಂ. ಶಿಲ್ಪ ಹೇಳಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವಿವೇಕ್ ಪೋಷಕರ ಕಾರ್ಯಾಗಾರದ ಅಡಿಯಲ್ಲಿ ಬಾಪೂಜಿ ಸಿಎಚ್‌ಐ ಕೇಂದ್ರ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಉಪಶಮನಾಕಾರಿ ಆರೈಕೆ ಕುರಿತು ಅವರು ಮಾಹಿತಿ ನೀಡಿದರು.
ಉಪಶಮನಕಾರಿ ಆರೈಕೆ ಮಾಹಿತಿ ಕೇವಲ ರೋಗ ನಿರೋಧನೆಯಲ್ಲ. ಆದರೆ ಶಾರೀರಿಕ, ಮಾನಸಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸುವುದು. ನೋವು ಮತ್ತು ತೊಂದರೆ ನಿವಾರಿಸುವುದಾಗಿದೆ. ರೋಗಿಯ ತೊಂದರೆಗಳನ್ನು ಕಡಿಮೆಗೊಳಿಸಿ, ಶಾಂತ ಮತ್ತು ಸಮಾಧಾನಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಶಕ್ತಿಗೊಳಿಸುತ್ತದೆ. ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಈ ಆರೈಕೆ ಸಹಾಯಕಾರಿ ಎಂದರು.ಪಾರ್ಕಿನ್ಸನ್ಸ್, ಡಿಮೆನ್ಷಿಯಾ, ಹೃದಯ ಅಸಮರ್ಥತೆ, ಮತ್ತು ಡಯಾಬಿಟೀಸ್ ಹೀಗೆ ದೀರ್ಘಕಾಲದ ಕಾಯಿಲೆಗಳಲ್ಲಿಯೂ ಈ ಆರೈಕೆಯ ಅಗತ್ಯವಿದೆ. ರೋಗಿಯ ಶಾರೀರಿಕ ಮತ್ತು ಮನೋವೈಜ್ಞಾನಿಕ ತೊಂದರೆಗಳನ್ನು ನಿರ್ವಹಿಸಲು ಇದು ಸಹಾಯಕ. ಈ ಆರೈಕೆ ಆಧ್ಯಾತ್ಮಿಕ ಮತ್ತು ಮಾನಸಿಕ ಬೆಂಬಲ ನೀಡಲಿದೆ. ಮಾತ್ರವಲ್ಲದೇ ರೋಗಿಯು ಬದುಕಿನ ತಿರುವುಗಳನ್ನು ಮತ್ತು ಮರಣದ ಭಯವನ್ನು ಎದುರಿಸಲು ಬೆಂಬಲ ನೀಡುತ್ತದೆ. ಇದಲ್ಲದೇ ಸಮಾಲೋಚನೆ ಮತ್ತು ಧ್ಯಾನದ ಮೂಲಕ ಮನಃಶಾಂತಿ ಒದಗಿಸುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಮಾಹಿತಿ ನೀಡಿದರು.
ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞರಾದ ಡಾ.ಸುರೇಶ್ ಬಾಬು. ಡಾ.ಮೃತ್ಯುಂಜಯ, ಡಾ.ರೇವಪ್ಪ, ಡಾ.ಸಚ್ಚಿನ ಬಾತಿ, ಡಾ.ನವೀನ್ ನಾಡಿಗ್, ಮಕ್ಕಳ ಆಸ್ಪತ್ರೆ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ರೊಳ್ಳಿ ಮಂಜುನಾಥ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು, ನರ್ಸಿಂಗ್ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಆಸ್ಪತ್ರೆಯ ಸಿಬ್ಬಂದಿ ಇದ್ದರು.- - -
ಕೋಟ್ ಉತ್ತಮ ಬದುಕಿಗಾಗಿ ಪ್ಯಾಲಿಯೇಟಿವ್ ಕೇರ್ ಸೇವೆಗಳು ಆರೋಗ್ಯ ಸೇವಾ ವ್ಯವಸ್ಥೆಯ ಅತ್ಯವಶ್ಯಕ ಅಂಗವಾಗಬೇಕು. ಸಾರ್ವಜನಿಕರಿಗೆ ಇದರ ಮಹತ್ವ ತಿಳಿಸಲು ಜಾಗೃತಿ ಅಭಿಯಾನಗಳು ಬೇಕು. ಪ್ಯಾಲಿಯೇಟಿವ್ ಕೇರ್ ಮನಸು ಮತ್ತು ದೇಹ ಎರಡರಿಗೂ ಶಾಂತಿ ತರುತ್ತದೆ. ಇದು ಕೇವಲ ಆರೋಗ್ಯ ಸೇವೆಯಲ್ಲ, ಅದು ರೋಗಿಯ ಮತ್ತು ಕುಟುಂಬದ ನೋವು, ಕಷ್ಟ, ಮತ್ತು ಭಯವನ್ನು ನಿವಾರಿಸಿ, ಮಾನವೀಯ ಜೀವನದ ಮೌಲ್ಯ ಹೆಚ್ಚಿಸುತ್ತದೆ- ಡಾ. ಎ.ಎಂ. ಶಿಲ್ಪ, ಪ್ಯಾಲಿಯೇಟಿವ್ ಕೇರ್ ತಜ್ಞೆ - - -
-28ಕೆಡಿವಿಜಿ41:ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ಸಂಶೋಧನಾ ಕೇಂದ್ರದ ವಿವೇಕ್ ಪೋಷಕರ ಕಾರ್ಯಾಗಾರದಲ್ಲಿ ನಡೆದ ಉಪಶಮನಾಕಾರಿ ಆರೈಕೆ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎ.ಎಂ. ಶಿಲ್ಪ ಮಾಹಿತಿ ನೀಡಿದರು.