ಶಿವಮೊಗ್ಗ: ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದು, ಇದರಿಂದ ಜನ ಸಾಮಾನ್ಯರ ಜೀವನದ ಗುಣಮಟ್ಟ ಉತ್ತಮ ರೀತಿಯಲ್ಲಿ ಸುಧಾರಣೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ತಿಳಿಸಿದರು.
ಯಾವುದೇ ದೇಶ ಪ್ರಗತಿಯಾಗಬೇಕಾದರೆ ಎಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಮತ್ತು ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರು. ಹಣ ನೀಡುವ ‘ಗೃಹಲಕ್ಷ್ಮ್ಛೀ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದರು.
ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕಿನ ಗುಣಮಟ್ಟ ಹೆಚ್ಚಿಸಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಅಭಿವೃದ್ಧಿ ಸಾಧ್ಯವಾಗಿದ್ದು, ಜೀವನಮಟ್ಟ ಸುಧಾರಿಸಿದೆ. ಉಚಿತ ಪ್ರಯಾಣದಿಂದ ಸರ್ಕಾರಕ್ಕೆ ಯಾವುದೇ ರೀತಿ ನಷ್ಟ ಇಲ್ಲ, ಬದಲಾಗಿ ಸಾರಿಗೆ ಇಲಾಖೆಗೆ ಲಾಭವೇ ಆಗುತ್ತಿದೆ. ಸರ್ಕಾರದ ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಯುವನಿಧಿ ಯೋಜನೆಗೆ ಹೆಚ್ಚೆಚ್ಚು ಯುವಜನತೆ ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆಯಬೇಕು. ಜನರು ತಮಗಾಗಿಯೇ ಇರುವ ವಿವಿಧ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಾರ್ತಾ ಇಲಾಖೆಯಿಂದ ಇಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕುರಿತು ಏರ್ಪಡಿಸಿರುವ ವಸ್ತುಪ್ರದರ್ಶನವನ್ನು ಎಲ್ಲರೂ ವೀಕ್ಷಿಸಬೇಕು ಎಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ರಾಜ್ಯದ ಬಡ, ಹಿಂದುಳಿದ ಮತ್ತು ಸಾಮಾನ್ಯ ಜನರ ಜೀವನ ಸುಗಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅತಿ ಮಹಾತ್ವಾಕಾಂಕ್ಷೆಯುಳ್ಳ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ಸು ಕಾಣುತ್ತಿದೆ. ಜೂ.26ರವರೆಗೆ ಒಂದು ವಾರ ಕಾಲ ಈ ವಸ್ತುಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಲಭ್ಯವಿರುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ.ಆರ್ ಸ್ವಾಗತಿಸಿದರು.
ರಾಜ್ಯದಲ್ಲಿ ಐತಿಹಾಸಿಕ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ ಯಶಸ್ವಿಯಾದ ರಾಜ್ಯ ಸರ್ಕಾರ ಇದರೊಂದಿಗೆ ಸರ್ವರಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯ, ಹಸಿವು ಮುಕ್ತ ಕರ್ನಾಟಕ್ಕಾಗಿ ಇಂದಿರಾ ಕ್ಯಾಂಟಿನ್ , ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಶುಲ್ಕವಿನಾಯಿತಿ, ವಸತಿ ಶಾಲೆಗಳಿಗೆ ಪ್ರವೇಶ, ಕಂದಾಯ ಗ್ರಾಮಗಳ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನರ ಕೈ ಹಿಡಿದಿದೆ.
- ಎಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷರು.