ತುಮಕೂರು: ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜೂನ್ 27ರಂದು ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಶುಕ್ರವಾರ ಶ್ರೀ ನಾಡಪ್ರಭು ಕೆಂಪೇಗೌಡ, ಡಾ. ಫ.ಗು. ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣ ಜಯಂತಿಗಳನ್ನು ಆಚರಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಅದೇ ರೀತಿ ಜುಲೈ 2ರಂದು ಡಾ. ಫ.ಗು. ಹಳಕಟ್ಟಿ ಜಯಂತಿಯನ್ನು ನಗರದ ಕನ್ನಡ ಭವನದಲ್ಲಿ ಹಾಗೂ ಜುಲೈ 10 ರಂದು ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಬೇಕೆಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘದ ಮುಖಂಡರು ಉಪಸ್ಥಿತರಿದ್ದರು.