- 12 ಮನೆಗಳಿಗೆ ಹಾನಿ । ದಿಗ್ಗೇನಹಳ್ಳಿ ಕೆರೆ ಕೋಡಿ ಬಿದ್ದು ಮನೆಗಳಿಗೆ ನುಗ್ಗಿದ ನೀರು । - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಾದ್ಯಂತ ಭಾನುವಾರ ಸಂಜೆಯಿಂದ ಸುರಿದ ಮಳೆಗೆ ಹಳ್ಳ, ಕೊಳ್ಳ, ಕೆರೆ ಕಟ್ಟೆಗಳೆಲ್ಲಾ ತುಂಬಿವೆ. ಚನ್ನಗಿರಿಯ ಹರಿದ್ರಾವತಿ ಹಳ್ಳ, ಕಾಕನೂರು ಹಿರೇಹಳ್ಳ ಭರ್ತಿಯಾಗಿ ಹರಿಯುತ್ತಿವೆ. ತಾಲೂಕಿನಲ್ಲಿ 12 ಮನೆಗಳಿಗೆ ಹಾನಿಯಾಗಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿವೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ತಿಳಿಸಿದ್ದಾರೆ.ಪಟ್ಟಣದ ದಿಗ್ಗೇನಹಳ್ಳಿ ರಸ್ತೆಯ ಹೊಸ ಬಡಾವಣೆಗಳಲ್ಲಿನ ವಸತಿ ಪ್ರದೇಶಗಳಿಗೆ ದಿಗ್ಗೇನಹಳ್ಳಿ ಗ್ರಾಮದ ಕೆರೆ ತುಂಬಿಕೊಂಡು ಕೋಡಿ ಮೂಲಕ ಹರಿಯುವ ನೀರು ನುಗ್ಗಿದೆ. ಆ ಪ್ರದೇಶ ಜಲವೃತಗೊಂಡಿವೆ. ತಾಲೂಕಿನ ವಿವಿಧ ಗ್ರಾಮಗಳಾದ ಬಸವಾಪಟ್ಟಣದ ಬಸಮ್ಮ, ರತ್ನಮ್ಮ, ಮಂಟರಘಟ್ಟ ಗ್ರಾಮದ ಸಿದ್ದರಾಮಪ್ಪ, ಕುಳೇನೂರು ಗ್ರಾಮದ ತಿಮ್ಮಪ್ಪ, ಅರಳಿಕಟ್ಟೆ ಗ್ರಾಮದ ದುರ್ಗಪ್ಪ, ಕಗತೂರು ಗ್ರಾಮದ ಶಿವಪ್ಪ, ಕರೇಕಟ್ಟೆ ಗ್ರಾಮದ ಧರ್ಮಾನಾಯ್ಕ್, ಹೊದಿಗೆರೆ ಗ್ರಾಮದ ರುದ್ರಪ್ಪ, ನಲ್ಲೂರು ಗ್ರಾಮದ ಹಸೀನ್ ಸಾಬ್, ಹಿರೇಗಂಗೂರು ಗ್ರಾಮದ ಯೋಗೀಶ್, ಕರೇಕಟ್ಟೆ ಗ್ರಾಮದ ಸೋಮಶೇಖರಪ್ಪ, ಎನ್.ಗಾಣದ ಕಟ್ಟೆ ಗ್ರಾಮದ ಹಾಲೇಶ್ ನಾಯ್ಕ್ ಎಂಬುವರ ವಾಸದ ಮನೆಗಳು ಕುಸಿದುಬಿದ್ದಿವೆ.
ಕಬ್ಬಳ ಕೆಂಗಾಪುರದ ಮಧ್ಯೆ ಸಂಪರ್ಕ ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಈ ಗ್ರಾಮದ ಜನರು ಓಡಾಡಲು ಪರ್ಯಾಯ ರಸ್ತೆಯಾಗಿ ಕಣಿವೆಬಿಳಚಿ ಗ್ರಾಮ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.ತಾಲೂಕಿನ ಸಂತೆಬೆನ್ನೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆಲ ಮನೆಗಳಿಗೆ ನೀರು ನುಗ್ಗಿದೆ. ಈ ಸ್ಥಳಕ್ಕೆ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕೊರಟೀಕೆರೆ, ಚಿಕ್ಕಗಂಗೂರು, ನೀತಿಗೆರೆ ಈ ಭಾಗಗಳಲ್ಲಿ ಹರಿಯುತ್ತಿರುವ ಹಿರೇಹಳ್ಳ ತುಂಬಿ ರಭಸವಾಗಿ ಹರಿಯುತ್ತಿದೆ. ತಾಲೂಕಿನ 9 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ಪ್ರಮಾಣದಂತೆ ಚನ್ನಗಿರಿ ಕೇಂದ್ರದಲ್ಲಿ 59.6 ಮೀ.ಮೀ. ಮಳೆದಾಖಲಾಗಿದ್ದರೆ, ದೇವರಹಳ್ಳಿಯಲ್ಲಿ 42.6, ಕತ್ತಲಗೆರೆ- 40, ತ್ಯಾವಣಿಗೆ- 16.6, ಬಸವಾಪಟ್ಟಣ- 51.2, ಜೋಳದಾಳ್- 75.8, ಸಂತೆಬೆನ್ನೂರು- 48, ಉಬ್ರಾಣಿ- 42.4, ಕೆರೆಬಿಳಚಿ- 30.4 ನಷ್ಟು ಮಳೆ ದಾಖಲಾಗಿದೆ. ಒಟ್ಟು 406.6 ಮೀ.ಮೀ ಮಳೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.- - - -21ಕೆಸಿಎನ್ಜಿ1:
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು ಸ್ಥಳಕ್ಕೆ ತಹಸೀಲ್ದಾರ್ ಶಂಕರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.-21ಕೆಸಿಎನ್ಜಿ2: ಮಳೆಯಿಂದ ಹಾನಿಗೊಳಗಾದ ಮನೆ.