ದಾಬಸ್‌ಪೇಟೆಯಲ್ಲಿ ಕಾಲೇಜಿಗೆ ಮದ್ಯಪಾನ ಮಾಡಿ ಬರುತ್ತಿದ್ದ ಪ್ರಾಚಾರ್ಯ ಅಮಾನತು

KannadaprabhaNewsNetwork | Published : Oct 4, 2024 1:04 AM

ಸಾರಾಂಶ

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರಸಾದ ಎಂ.ಸಿ ಕಾಲೇಜಿಗೆ ಕುಡಿದು ಬರುತ್ತಿರುವುದರಿಂದ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪದ್ಮಿನಿ ಎಸ್.ಎನ್ ಆದೇಶ । ತಪ್ಪೊಪ್ಪಿಕೊಂಡ ಯಂಟಗಾನಹಳ್ಳಿ ಕಾಲೇಜು ಪ್ರಾಚಾರ್ಯ

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರಸಾದ ಎಂ.ಸಿ ಕಾಲೇಜಿಗೆ ಕುಡಿದು ಬರುತ್ತಿರುವುದರಿಂದ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.2021ರಲ್ಲಿ ಯಂಟಗಾನಹಳ್ಳಿ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಪ್ರಸಾದ ಎಂ.ಸಿ ಕಾಲೇಜಿಗೆ ಕುಡಿದು ಬರುತ್ತಿದ್ದರು. ಮಹಿಳಾ ಶೌಚಾಲಯಕ್ಕೆ ನೀರಿನ ಸಮಸ್ಯೆ ಹಾಗೂ ಎಲ್ಲಾ ಶೌಚಾಲಯ ಬಂದ್ ಆಗಿರುವುದು, ಕಾಲೇಜು ಕಿಟಕಿ ಹೊಡೆದಿದ್ದರೂ ಸರಿಪಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಈ ಬಗ್ಗೆ 2021ರಿಂದ 2023ರವರೆಗೆ ಸ್ಥಳೀಯರು, ಉಪನ್ಯಾಸಕರು ದೂರು ನೀಡಿದ್ದಾರೆ. ಆದರೆ ಮೇಲಾಧಿಕಾರಿಗಳ ಬಲ, ರಾಜಕೀಯ ಪ್ರಭಾವದಿಂದ ಯಾವುದೇ ತನಿಖೆ ಹಾಗೂ ಕ್ರಮವಿಲ್ಲದೆ ಪ್ರಾಂಶುಪಾಲರಾಗಿ ಮುಂದುವರೆದಿದ್ದಾರೆ. ಇದರಿಂದ ದಾಖಲಾತಿ ಕುಸಿತವನ್ನು ಕಂಡ ಡಿಡಿಪಿಯು ಕಾಲೇಜಿನ ಸ್ಥಿತಿಗತಿ ಗಮನಿಸಲು ಮುಂದಾಗಿದ್ದರು.

ಬೆಂಗಳೂರು ಗ್ರಾಮಾಂತರ ಡಿಡಿಪಿಯು ಆಗಿದ್ದ ಡಾ.ಬಾಲಗುರುಮೂರ್ತಿ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಸ್ಥಿತಿ ಕಂಡು ಆಶ್ಚರ್ಯವಾಗಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಏ.23ರಂದು ತನಿಖೆ ಆರಂಭವಾಗಿತ್ತು. ಪ್ರಾಂಶುಪಾಲ ಪ್ರಸಾದ್ ೩ ವರ್ಷದಿಂದ ಕುಡಿದು ಬರುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಜೂ.6ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ಬಾ ಕಾಲೇಜಿಗೆ ದಿಢೀರ್ ಭೇಟಿ ನೀಡಿ ಕಾಲೇಜು ಸ್ಥಿತಿಗತಿ ಪರಿಶೀಲಿಸಿ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖೆಯಲ್ಲಿ ಪ್ರಾಂಶುಪಾಲ ಮದ್ಯಪಾನ ಮಾಡುವುದಾಗಿ ಒಪ್ಪಿಕೊಂಡಿದ್ದು, ವಾಸ್ತವ ಸ್ಥಿತಿಯನ್ನು ಮನಗಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಾಂಶುಪಾಲ ಪ್ರಸಾದ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಾಂಶುಪಾಲನನ್ನು ಆ.27ರಂದು ಅಮಾನತ್ತು ಮಾಡಿದ್ದರೂ ಸಹ ಆದೇಶ ಪ್ರತಿಯನ್ನು ಸಾರ್ವಜನಿಕರಿಗೆ ಸಿಗದಂತೆ ಗೌಪ್ಯತೆ ಕಾಪಾಡಲಾಗಿತ್ತು. ಇಲ್ಲಿಯವರೆಗೂ ಪ್ರಾಂಶುಪಾಲ ಕೆಲಸ ನಿರ್ವಹಿಸಿದ್ದರು. ಈಗ ಅಮಾನತು ಮಾಡಿದ ಆದೇಶ ಪ್ರತಿ ವೈರಲ್ ಆಗಿದ್ದು ಡಿಡಿಪಿಯು ಅವರು ಹೊಸ ಪ್ರಾಂಶುಪಾಲರ ನೇಮಕಕ್ಕೆ ತಯಾರಿ ನಡೆಸಿದ್ದಾರೆ.

Share this article