- ಹಲ್ಲರೆ ಗ್ರಾಮದ ಪ್ರಕರಣ ಖಂಡನೆಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಮಿನಿವಿಧಾನಸೌಧದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ ವಿವಿಧ ದಲಿತಪರ ಸಂಘಟನೆಯ ಕಾರ್ಯಕರ್ತರು, ಮಹಿಳೆಯರು, ಸುತ್ತಮುತ್ತಲಿನ ತಾಲೂಕಿನ ದಲಿತರು ತಾಲೂಕು ಆಡಳಿತ ವೈಫಲ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ಪಾಲ್ಗೊಂಡು ತಮ್ಮ ಆಕ್ರೋಶ ಹೊರ ಹಾಕುವ ಮೂಲಕ ಘಟನೆಗೆ ಕಾರಣರಾದ ಪೊಲೀಸರು ಮತ್ತು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಲು ವಿರೋಧ ವ್ಯಕ್ತಪಡಿಸುವ ಜತೆಗೆ ಪರಿಶಿಷ್ಟ ಜಾತಿಯವರ ಬಡಾವಣೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಹಿಳೆಯರು, ವೃದ್ಧರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಬೈಕ್ ಗಳು ಹಾಗೂ ಮನೆಯ ಛಾವಣಿಗಳನ್ನು ಹಾಳುಗೆಡುವ ಮೂಲಕ ವಿಕೃತಿ ತೋರಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಂಬೇಡ್ಕರ್ ನೀಡಿರುವ ಮೀಸಲಾತಿ ಪಡೆಯುವ ಪ. ಪಂಗಡದವರು ಅಂಬೇಡ್ಕರ್ ಅವಮಾನಿಸಿರುವುದು ಅವರ ಹೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹರಿಹಾಯ್ದರು.
ಗಲಭೆಯಿಂದಾಗಿ ಪ. ಜಾತಿಯ ಬಡಾವಣೆಗಳಲ್ಲಿ ಹಲವರ ಮನೆಗಳು ಹಾಗೂ ಬೈಕ್ ಗಳು ಜಖಂಗೊಂಡಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಪ. ಜಾತಿಗೆ ಸೇರಿದ ಅಮಾಯಕರ ಮೇಲೂ ಕೇಸ್ ದಾಖಲಿಸಲಾಗಿದ್ದು, ಕೂಡಲೇ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಎಎಸ್ಪಿ ಡಾ.ನಂದಿನಿ ಹಲ್ಲರೆ ಗ್ರಾಮದಲ್ಲಿ ಗಲಭೆ ನಡೆದ ಅರ್ಧ ಗಂಟೆಯಲ್ಲೇ ಗಲಾಟೆಗೆ ಕಾರಣರಾದ ಹಲವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನೂನು ರೀತ್ಯಾ ಯಾವೆಲ್ಲ ಕ್ರಮ ಜರುಗಿಸಬಹುದೋ ಎಲ್ಲವನ್ನು ಇಲಾಖೆಯು ಮಾಡಿದೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಮಲ್ಲೇಶ್, ನಾರಾಯಣ, ಸುರೇಶ್, ಬಸವಣ್ಣ, ಮಂಜು, ಮಾಜಿ ಮೇಯರ್ ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ. ನಾಗೇಶ್ ರಾಜ್, ಬಿ.ಎಸ್. ರಾಮು, ಚಂದ್ರು, ಚಿಕ್ಕಣ್ಣ, ರಾಜೇಶ್, ನಾಗೇಂದ್ರ, ರಾಮಣ್ಣ, ಸಂದೇಶ್ ಸೇರಿದಂತೆ ಸಾವಿರಾರು ದಲಿತರು ಮತ್ತು ಹಲ್ಲರೆ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಇದ್ದರು.