ಕನಕಗಿರಿ: ಜಿಲ್ಲೆಯ 34 ಕಡೆಗಳಲ್ಲಿ ಪ್ರಜಾಸೇವೆ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಇದರಲ್ಲಿ 4116 ಅರ್ಜಿಗಳ ಪೈಕಿ ನಿಯಮಾನುಸಾರ 3590 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದಿರುವ 526 ಅರ್ಜಿಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.
ಸಾಮಾನ್ಯ ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಶಯವಾಗಿತ್ತು. ಇದಕ್ಕಾಗಿಯೇ ಪ್ರತ್ಯೇಕ ಇಲಾಖೆಯನ್ನು ರಚಿಸಿ ಅದಕ್ಕೆ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಿ ನಿತ್ಯವೂ ಅರ್ಜಿಗಳ ವಿಲೇವಾರಿ ಮೇಲೆ ನಿಗಾವಹಿಸಲಾಗಿದೆ. ರಾಜ್ಯವ್ಯಾಪಿ ನಡೆಯುವ ಪ್ರಜಾ ಸೇವೆಯಲ್ಲಿ ಸ್ವೀಕೃತಿಯಾದ ಸಾರ್ವಜನಿಕರ ಸಮಸ್ಯೆಗಳು ಸಕಾಲದಲ್ಲಿ ವಿಲೇ ಮಾಡಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮಾತನಾಡಿದರು. ಪಪಂ ಅಧ್ಯಕ್ಷೆ ತನುಶ್ರೀ ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಮೆಹಬೂಬ್ ಜಿಲಾನಿ ಖುರೇಶಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ತಹಸೀಲ್ದಾರ ಚಂದ್ರಶೇಖರ ಗಾಳಿ, ತಾಪಂ ಇಒ ರಾಜಶೇಖರ ಇದ್ದರು. 11 ತಿಂಗಳಿಂದ ದಲಿತ ಯುವತಿ ನಾಪತ್ತೆ: ಹೇರೂರು ಮೂಲದ ದಲಿತ ಯುವತಿಯೊರ್ವಳು ನಾಪತ್ತೆಯಾಗಿ 11 ತಿಂಗಳು ಕಳೆದಿದ್ದು, ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸ್ ಇಲಾಖೆ ಮೌನವಹಿಸಿದೆ. ತಾಯಿ ಶಿವಮ್ಮ ಅವರು ಮಗಳ ಚಿಂತೆಯಲ್ಲಿದ್ದು, ಕುಟುಂಬಸ್ಥರು ಅವಿದ್ಯಾವಂತರಾಗಿದ್ದಾರೆ. ತಕ್ಷಣವೇ ಈ ಬಗ್ಗೆ ಕ್ರಮ ವಹಿಸಬೇಕೆಂದು ದಲಿತ ಮುಖಂಡ ಪಾಮಣ್ಣ ಅರಳಿಗನೂರು ಮನವಿ ಮಾಡುತ್ತಿದ್ದಂತೆ ಎಸ್ಪಿ ಸಾಹಿಲ್ ಅವರು, ಕೂಡಲೇ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ ಎಂದು ಉತ್ತರಿಸಿದರು.ಎಲ್ಲ ರೈತರಿಗೂ ₹5 ಸಾವಿರ ಕೊಡ್ತೇವೆ-ಸಚಿವ: ಮೊದಮೊದಲು ರೈತರಿಗೆ ನಮ್ಮ ಸರ್ಕಾರ ₹2500 ನೀಡಲು ತಿರ್ಮಾನಿಸಿತ್ತು. ನಂತರದ ದಿನಗಳಲ್ಲಿ ರೈತರ ಸಂಕಷ್ಟವನ್ನು ನೋಡಿ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ₹5 ಸಾವಿರ ಪರಿಹಾರವನ್ನು ಡಿಬಿಟಿ ಮೂಲಕ ನೀಡಲು ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಸದ್ಯ ಜಿಲ್ಲೆಯಲ್ಲಿ 1,55,369 ರೈತರ ಪೈಕಿ 1,19,917 ರೈತರಿಗೆ ಡಿಬಿಟಿ ಮೂಲಕ ಬರ ಪರಿಹಾರ ಜಮೆಯಾಗಿದೆ. ತಾಂತ್ರಿಕ ದೋಷದಿಂದ ಬಾಕಿ ಉಳಿದಿರುವ ಸುಮಾರು 35 ಸಾವಿರ ರೈತರ ಖಾತೆಗಳಿಗೂ ಡಿ. 1ರ ನಂತರ ಪರಿಹಾರದ ಹಣ ಜಮೆಯಾಗಲಿದೆ. ಅಲ್ಲದೆ, 1.53 ಲಕ್ಷ ರೈತರಿಗೆ ₹160 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ತಂಗಡಗಿ ತಿಳಿಸಿದರು.