ಕನ್ನಡಪ್ರಭ ವಾರ್ತೆ ಬೆಂಗಳೂರು
ಈಗಾಗಲೇ ವಚನ ಸಾಹಿತ್ಯ ತಜ್ಞರು, ಬಸವ ಸಮಿತಿ, ಕೂಡಲಸಂಗಮ ಪೀಠ ಸೇರಿದಂತೆ ವಿವಿಧ ಮಠಗಳ ಮಠಾಧೀಶರನ್ನು ಸಂಪರ್ಕಿಸಿ 12 ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಬಸವ ತತ್ವ ಮತ್ತು ವಚನ ಆಧಾರಿತ ಪೂರಕವಾದ ಎಲ್ಲ ಪರಿಕಲ್ಪನೆಯೂ ಈ ಪ್ರದರ್ಶನದಲ್ಲಿ ಇರಲಿದೆ. ಕೆಲವು ಪ್ರತಿಕೃತಿಗಳನ್ನು ಪುಷ್ಪಗಳಿಂದ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಯಾವ್ಯಾವುದನ್ನು ಹೇಗೆ ಮಾಡಬೇಕೆಂಬುದರ ಅಂತಿಮ ನಿರ್ಧಾರವನ್ನು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಅನುಭವ ಮಂಟಪದ ಆಕರ್ಷಣೆ:ಈ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ವಿಶ್ವದ ಮೊಟ್ಟ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವ ಮಂಟಪವನ್ನು ಗಾಜಿನ ಮನೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಅನುಭವ ಮಂಟಪ ಸುಮಾರು 7 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ರೂಪುಗೊಳ್ಳಲಿದೆ. ಜತೆಗೆ ಬಸವಣ್ಣ ಅವರ ವಚನದೊಂದಿಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಅನೇಕ ಶರಣರ ವಚನಗಳ ಬಗ್ಗೆಯೂ ಮಾಹಿತಿಯು ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ. ಅನುಭವ ಮಂಟಪ, ಕೂಡಲಸಂಗಮದ ಐಕ್ಯಮಂಟಪ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ಈ ಕುರಿತು ಡಿ.26ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಶರಣರ ಪ್ರತಿಮೆಗಳು, ಕಲಾಕೃತಿಗಳು, ಬಸವಣ್ಣ ಅವರು ಜನಿಸಿದ ಇಂಗಳೇಶ್ವರ, ಕಲ್ಯಾಣ, ಸೇರಿದಂತೆ ಬಸವಣ್ಣ ಅವರ ಜೀವನ ದರ್ಶನವನ್ನು ತೋರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೂಡಲಸಂಗಮ, ಬಸವ ಸಮಿತಿ, ಮುರುಘರಾಜೇಂದ್ರ ಮಠ ಇತ್ಯಾದಿ ಕಡೆಗಳಲ್ಲಿ ಬಸವಣ್ಣ ಅವರಿಗೆ ಸಂಬಂಧಿಸಿದ ಕಲಾಕೃತಿ, ಪ್ರತಿಮೆಗಳನ್ನು ರಚಿಸಿದ ಕಲಾವಿದರನ್ನು ಸಂಪರ್ಕಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಬಸವಣ್ಣ ಅವರು ತಾಳೆಗರಿಯಲ್ಲಿ ಬರೆದಿರುವ ವಚನಗಳನ್ನು ಸಂಗ್ರಹಿಸುತ್ತಿದ್ದು, ಅವುಗಳನ್ನು ಪ್ರದರ್ಶಿಸಲಾಗುವುದು.
---
-ಶಮ್ಲಾ ಇಕ್ಬಾಲ್, ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ.