ರಾಜಕೀಯದಲ್ಲಿ ಶಿವಗಂಗಾ ನೆತ್ತಿಕೂಡದ ಹಸುಗೂಸು: ರೇಣು ವಾಗ್ದಾಳಿ

KannadaprabhaNewsNetwork |  
Published : Jun 28, 2025, 12:18 AM IST

ಸಾರಾಂಶ

ರಾಜಕೀಯದಲ್ಲಿ ಇಲ್ಲೂ ನೆತ್ತಿ ಕೂಡದ ಎಳೆ ಹಸುಗೂಸಾದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಆರೋಪದ ಹಿಂದೆ ಸ್ವಪಕ್ಷದ ಕೆಲವರ ಪಿತೂರಿ ಇದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

- ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮರಳು ದಂಧೆ ಬಗ್ಗೆ ನಾನು ಮಾತಾಡಿದ್ದು ಸತ್ಯ - ಕ್ಯಾಸಿನೋ, ಇಸ್ಪೀಟ್‌ ದಂಧೆ ನಡೆಸಿರುವ ಬಗ್ಗೆ ಮಾತಾಡಿಲ್ಲ, ಹಗುರವಾಗಿಯೂ ಮಾತನಾಡಿಲ್ಲ

- ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಹಣ ಪಡೆದಿದ್ದೇನೆಂಬ ಆರೋಪ ನಿರಾಧಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜಕೀಯದಲ್ಲಿ ಇಲ್ಲೂ ನೆತ್ತಿ ಕೂಡದ ಎಳೆ ಹಸುಗೂಸಾದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಆರೋಪದ ಹಿಂದೆ ಸ್ವಪಕ್ಷದ ಕೆಲವರ ಪಿತೂರಿ ಇದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಗಂಗಾ ಬಸವರಾಜ ಮರಳು ದಂಧೆ ನಡೆಸುತ್ತಾರೆಂದು ಹೇಳಿದ್ದು ನಿಜ. ಕ್ಯಾಸಿನೋ, ಇಸ್ಪೀಟ್‌ ದಂಧೆ ನಡೆಸಿರುವ ಬಗ್ಗೆ ಮಾತಾಡಿಲ್ಲ, ಹಗುರವಾಗಿಯೂ ಮಾತನಾಡಿಲ್ಲ ಎಂದ ಅವರು, ಮರಳು ದಂಧೆ ಒಪ್ಪಿಕೊಂಡ ಬಸವರಾಜ ಶಿವಗಂಗಾ ಮರಳು ಮಾರಾಟಕ್ಕೆ ಪರವಾನಿಗೆ ಹೊಂದಿದ್ದರೆ ತೋರಿಸಲಿ ಎಂದು ಒತ್ತಾಯಿಸಿದರು.

ಒಬ್ಬ ಚುನಾಯಿತ ಜನಪ್ರತಿನಿಧಿಗೆ ಗೌರವ ಕೊಡಬೇಕೆಂಬ ಅರಿವು ನನಗಿದೆ. ಬಿಜೆಪಿಯಿಂದ ನನ್ನನ್ನು ಉಚ್ಚಾಟಿಸಲು ಹೈಕಮಾಂಡ್‌ಗೆ ನನ್ನ ತಪ್ಪುಗಳನ್ನು ಹೇಳಬೇಕಾಗಿದೆ. ಆದರೆ, ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ಹಾಗಾಗಿಯೇ ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಅವರನ್ನು ಬಳಸಿಕೊಂಡು, ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಸ್ವಚ್ಛವಾದ ಬಿಳಿಹಾಳೆಯಂತೆ ನನ್ನ ಬದುಕು ಇದೆ. ಹಾಗಾಗಿಯೇ ನನ್ನ ವಿರುದ್ಧ ಆರೋಪಗಳು ಕೇಳಿಬಂದರೂ ಹೊನ್ನಾಳಿ ಕ್ಷೇತ್ರದ ಮತದಾರರು 2007ರ ಚುನಾವಣೆಯಲ್ಲಿ ಮತ್ತೆ ನನಗೆ ಆಶೀರ್ವಾದ ಮಾಡಿ, ಕೈಹಿಡಿದು ಗೆಲ್ಲಿಸಿದ್ದರು. ಇಲ್ಲದಿದ್ದರೆ, ನಾನು ರಾಜಕೀಯವಾಗಿಯೇ ನಿರ್ನಾಮವಾಗುತ್ತಿದ್ದೆ ಎಂದರು.

ಶಿವಗಂಗಾ ಬಸವರಾಜ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಗಂಭೀರ ಆರೋಪ ಮಾಡಿರುವುದಷ್ಟೇ ಅಲ್ಲ, ಮರಳು ದಂಧೆ, ಮಕ್ಕಳ ಶಿಕ್ಷಣಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಹಣ ಪಡೆದಿದ್ದೇನೆಂಬ ಆರೋಪಗಳೆಲ್ಲಾ ನಿರಾಧಾರ. ಎಲ್ಲಿಗೆ ಕರೆದರೂ ಬಂದು ಆಣೆ, ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಆರೋಪಗಳು ಸಾಬೀತುಪಡಿಸಿದರೆ, ರಾಜಕೀಯ ನಿವೃತ್ತಿ ಅಷ್ಟೇ ಅಲ್ಲ, ನೇಣುಗಂಬಕ್ಕೇರಲೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ ಬಿ.ಎಂ. ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್ ಬಿ.ಜಿ. ಅಜಯ ಕುಮಾರ್, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಇತರರು ಇದ್ದರು.

- - -

(ಕೋಟ್‌) * ಎಲ್ಲಿ, ಯಾವಾಗ ಆಣೆ ಮಾಡಲಿ?, ದಿನಾಂಕ ನಿಗದಿಪಡಿಸು ದಾವಣಗೆರೆ: ನನ್ನ ಮೇಲೆ ಆರೋಪ ಮಾಡಿರುವ ಚನ್ನಗಿರಿ ಶಾಸಕರು, ಆಣೆ ಪ್ರಮಾಣಕ್ಕೆ ಸವಾಲು ಹಾಕಿದ್ದಾರೆ. ಆಣೆ ಪ್ರಮಾಣ ಮಾಡಲು ನೀವೇ ಹೇಳಿರುವ ಮಾವಿನಹಳ್ಳಿ ಶ್ರೀ ರುದ್ರಸ್ವಾಮಿ ಸನ್ನಿಧಿಗೆ ಬರಬೇಕಾ? ಧರ್ಮಸ್ಥಳಕ್ಕಾ, ಸಿಗಂದೂರಿಗಾ, ಕಟೀಲುಗಾ?

ಹೀಗೆಂದು ರೇಣುಕಾಚಾರ್ಯ ಅವರು ಬಸವರಾಜ ಶಿವಗಂಗಾ ಅವರಿಗೆ ತಾಕೀತು ಮಾಡಿದ್ದಾರೆ. ಯಾವುದೇ ದೇವಸ್ಥಾನ, ಮಠ, ಮಂದಿರಕ್ಕೆ ಕರೆದರೂ ಆಣೆ, ಪ್ರಮಾಣ ಮಾಡಲು ಸಿದ್ಧ. ದಿನಾಂಕ, ಸಮಯ ನಿಗದಿಪಡಿಸಿರಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೊತೆಗೆ ಪ್ರವಾಸ ಮಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಪಕ್ಷಕ್ಕೆ ದ್ರೋಹ ಮಾಡಿಲ್ಲ. ಶಿವಗಂಗಾ ಬಸವರಾಜಗೆ ಸವಾಲು ಹಾಕುತ್ತೇನೆ. ಲೋಕಸಭೆ ಚುನಾವಣೆಗೆ 6 ದಿನ ಮುಂಚೆ ದಾವಣಗೆರೆ ಹೋಟೆಲ್‌ವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಾರ ಜೊತೆ ಬರ್ಥ್‌ ಡೇ ಪಾರ್ಟಿ ಮಾಡಿದ್ದಿರಿ ಎಂಬುದಕ್ಕೆ ಉತ್ತರ ನೀಡಬೇಕು ಎಂದರು.

- - -

(ಟಾಪ್‌ ಕೋಟ್‌) ಏಯ್‌ ಮಿಸ್ಟರ್, ಹೊಟ್ಟೆಪಾಡಿಗೆ ರಾಜಕಾರಣ ಮಾಡುವವರು ನೀವು. ನಾನೂ ವೀರಶೈವ ಲಿಂಗಾಯತನಾಗಿ ಹುಟ್ಟಿದ್ದೇನೆ. ನನಗೆ ಉಪ ಜಾತಿ ಗೊತ್ತಿಲ್ಲ. ಬಾ ನೋಡೋಣ. ನನಗೂ ಸಮಾಜ ಓಟು ಕೊಟ್ಟಿದೆ. ಎಲ್ಲಾ ಉಪ ಜಾತಿಗಳೂ ನನಗೆ ಆಶೀರ್ವದಿಸಿವೆ. ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಳ್ಳು ಎಸ್ಸಿ ಜಾತಿ ಪ್ರಮಾಣಪತ್ರ ಪಡೆದಿದ್ದಾಗಿ ಆರೋಪಿಸಿದ್ದೀರಿ. ನನ್ನ ಮಕ್ಕಳು ಮೆರಿಟ್ ಸ್ಟೂಡೆಂಟ್ಸ್. ಅದರ ಆಧಾರದಲ್ಲಿ ಶಿಕ್ಷಣ ಪಡೆದಿದ್ದಾರೆ.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - -

-27ಕೆಡಿವಿಜಿ.ಜೆಪಿಜಿ: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!