ನರಗುಂದ: ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ ಹೇಳಿದರು.
ಮಾದಕ ವ್ಯಸನ ಮತ್ತು ಇದರ ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಯಿಂದ ಜನರನ್ನು ರಕ್ಷಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂ. 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಯುವ ಸಮೂಹವನ್ನು ಮಾದಕ ದ್ರವ್ಯ ಸೇವನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ 1986ರ ಜೂ. 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಆರಂಭಿಸಲಾಯಿತು. ಅದಾದ ಬಳಿಕ ವಿಶ್ವಸಂಸ್ಥೆಯು 1997ರಲ್ಲಿ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗವನ್ನು ಆರಂಭಿಸಿತು. ಕಾನೂನುಬಾಹಿರ ಚಟುವಟಿಕೆಯಿಂದ ಯುವ ಸಮೂಹ ರಕ್ಷಣೆ ಮಾಡುವ ಉದ್ದೇಶವನ್ನು ಈ ದಿನವು ಹೊಂದಿದೆ ಎಂದರು.
ಕೊಪ್ಪಳದ ಜನಜಾಗೃತಿ ವೇದಿಕೆ ಸಂಚಾಲಕ ನಾಗೇಶ ಮಾತನಾಡಿ, ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಯಾವುದು ಅಡ್ಡಿಯಾಗುತ್ತದೆಯೋ ಅದರಿಂದ ನಾವು ದೂರ ಇರಬೇಕು. ನಮ್ಮ ಬದುಕಿನ ಹೀರೋ ಸಿನಿಮಾ ಹೀರೋಗಳಲ್ಲ, ನಮ್ಮ ಮನೆಯ ಗುರು-ಹಿರಿಯರು, ಶಿಕ್ಷಕರು. ಆದ್ದರಿಂದ ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎಚ್.ಬಿ. ಅಸೂಟಿ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ದಿಶೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆ ಅವರು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂದಿಗೂ ಹಲವು ಕಡೆ ರಾಜ್ಯಾದ್ಯಂತ ಮಾದಕ ವ್ಯಸನ ಮುಕ್ತ ಶಿಬಿರಗಳನ್ನು ನಡೆಸಿ, ಅನೇಕರಿಗೆ ಮಾರ್ಗದರ್ಶನ ಮಾಡಿ, ಹಲವು ಯುವಕರನ್ನು ಮಾದಕ ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ ಎಂದರು.
ಬಿಇಡಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಎಂ.ಇ. ವಿಶ್ವಕರ್ಮ ಅವರು ವಿಶ್ವ ಮಾದಕ ವಸ್ತು ವಿರೋಧಿ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಲತಿ ದಿನೇಶ, ರೈತ ಮುಖಂಡ ಬಸವರಾಜ ಸಾಬಳೆ, ತಾಲೂಕು ಕರವೇ ಅಧ್ಯಕ್ಷ ನಬಿಸಾಬ್ ಕಿಲ್ಲೆದಾರ ಇದ್ದರು.
ಸ್ವಾತಿ ಹೊಸಮನಿ ಸ್ವಾಗತಿಸಿದರು. ಶೋಭಾ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು, ನಿರಂಜನಗೌಡ ನಿಂಗನಗೌಡ ವಂದಿಸಿದರು.