ಶೃಂಗೇರಿ ಕ್ಷೇತ್ರದಲ್ಲಿ ಮಳೆ ನಿಂತ ನಂತರ ಗುಂಡಿ ಮುಚ್ಚುವ ಕಾರ್ಯ

KannadaprabhaNewsNetwork | Published : Oct 2, 2024 1:08 AM

ಸಾರಾಂಶ

ಬಾಳೆಹೊನ್ನೂರು, ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಜಲ್ಲಿ ಮಿಶ್ರಿತ ಕಾಂಕ್ರೀಟನ್ನು ರಸ್ತೆಗೆ ಹಾಕಲಾಗಿದ್ದು, ಪುನಃ ಮಳೆ ಹೆಚ್ಚಾಗಿರುವ ಕಾರಣ ಗುಂಡಿಗಳು ಹೆಚ್ಚಾಗಿವೆ. ಮಳೆ ಸಂಪೂರ್ಣವಾಗಿ ನಿಂತ ನಂತರ ಕ್ಷೇತ್ರದಲ್ಲಿ ಸಂಪೂರ್ಣ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಈಗ ಯಾವುದೇ ರಸ್ತೆ ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಜಲ್ಲಿ ಮಿಶ್ರಿತ ಕಾಂಕ್ರೀಟನ್ನು ರಸ್ತೆಗೆ ಹಾಕಲಾಗಿದ್ದು, ಪುನಃ ಮಳೆ ಹೆಚ್ಚಾಗಿರುವ ಕಾರಣ ಗುಂಡಿಗಳು ಹೆಚ್ಚಾಗಿವೆ. ಮಳೆ ಸಂಪೂರ್ಣವಾಗಿ ನಿಂತ ನಂತರ ಕ್ಷೇತ್ರದಲ್ಲಿ ಸಂಪೂರ್ಣ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕ್ಷೇತ್ರದ ಹಲವೆಡೆ ಗುಣಮಟ್ಟದಲ್ಲಿ ರಸ್ತೆ ಗುಂಡಿ ಮುಚ್ಚಲಾಗಿದೆ. ಇದೀಗ ಸಹ ರಸ್ತೆ ಗುಂಡಿ ಮುಚ್ಚಲು ಕಾರ್ಯಯೋಜನೆ ತಯಾರಿಸಿದ್ದು, ಮಳೆ ನಿಂತ ತಕ್ಷಣ ಗುಂಡಿ ಮುಚ್ಚುವ ಕಾರ್ಯ ನಡೆಸಲಾಗುವುದು.

ಇದೀಗ ಯಾವುದೇ ರಸ್ತೆ ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮಳೆ ನಿಂತ ತಕ್ಷಣ ಗುಂಡಿ ಸ್ವಚ್ಛಗೊಳಿಸಿ ಡಾಂಬರ್ ಹಾಕಿ ಮುಚ್ಚಿಸಲು ತಿಳಿಸಲಾಗಿದೆ. ಈಗ ಕಾಮಗಾರಿ ನಡೆಸಿದರೆ ಅದು ಬೇಗ ಕಿತ್ತು ಹೋಗಲಿದೆ. ರಸ್ತೆ ಹಾಳಾದಲ್ಲಿ ಸಂಪೂರ್ಣ ಮರು ಡಾಂಬರೀಕಣ ಮಾಡಲಾಗುವುದು. ಇದಕ್ಕಾಗಿ ಹಣ ಮೀಸಲಿಡಲಾಗಿದೆ.

ಅತಿವೃಷ್ಠಿಯಲ್ಲಿ ಎಲ್ಲಿ ಹಾನಿಯಾಗಿದೆ ಅವುಗಳಿಗೆ ಬಹುತೇಕ ಹಣ ಮಂಜೂರು ಮಾಡಿಸಲಾಗಿದೆ. ಕುಂಚೂರು ಬಳಿ ಭೂ ಕುಸಿತಕ್ಕೆ ರೂ.4.80 ಕೋಟಿ ಹಣ ಮಂಜೂರು ಮಾಡಿಸಲಾಗಿದೆ.

ಗ್ರಾಮೀಣ ರಸ್ತೆಗಳು ಕಡಿತವಾಗಿವೆ ಅದನ್ನು ದುರಸ್ಥಿಪಡಿಸಲು ಕಾಮಗಾರಿಗೆ ಶಿಫಾರಸ್ಸು ಮಾಡಲಾಗಿದೆ. ರಸ್ತೆ ಕಾಮಗಾರಿ ಯಾವುದೇ ಭಾಗದಲ್ಲಿ ಕಳಪೆ ಕಾಮಗಾರಿಯಾಗಿದ್ದರೂ ಗುತ್ತಿಗೆದಾರರಿಂದ ಪುನಃ ಕಾಮಗಾರಿ ಅಲ್ಲಿ ಕಾಮಗಾರಿ ಮಾಡಿಸಲಾಗುವುದು ಎಂದರು.

ಅರಣ್ಯ ಒತ್ತುವರಿ ಸಮಸ್ಯೆ ಗಂಭೀರವಾಗಿದ್ದು, ಇದಕ್ಕೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದು ಸಭೆ ಮಾಡಲಾಗಿದೆ. ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರ ಆ ಕೆಲಸ ಮಾಡಿಲ್ಲ. ಇದೀಗ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡುವ ಕಾರ್ಯ ನಡೆಯುತ್ತಿದ್ದು, ಆ ಬಳಿಕ ಜಂಟಿ ಸರ್ವೆ ನಡೆಸಿ, ಅರ್ಹ ರೈತರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗುವುದು.

ಈ ಹಿಂದೆ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿರುವ ದೊಡ್ಡ ಕಂಪೆನಿ ಎಸ್ಟೇಟ್‌ಗಳ ಒತ್ತುವರಿ ಬಿಡಿಸಲು ನಾವು ಕ್ರಮ ತೆಗೆದುಕೊಂಡಿದ್ದೇವೆ. ಹೊಸ ಒತ್ತುವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಣ್ಣ ರೈತರ, ಬಡ ರೈತರ ಒತ್ತುವರಿ ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲ.

ಜಂಟಿ ಸರ್ವೆ ಆದ ಬಳಿಕ ಸೆಕ್ಷನ್ 17 ಅಡಿ ಆಗಿರುವ ಒತ್ತುವರಿ ತೆರವುಗೊಳಿಸಲಾಗುವುದು. ಜನರಿಗೆ ನ್ಯಾಯ ಕೊಡಿಸಲು ನಾವು ಅಧಿಕಾರದಲ್ಲಿರ ಬೇಕೆ ಹೊರತು ರಾಜೀನಾಮೆ ನೀಡಿ ನ್ಯಾಯ ಕೊಡಿಸಲು ಆಗಲ್ಲ. ಕೆಲವರು ವಿರೋಧಕ್ಕಾಗಿ ನಮ್ಮ ರಾಜೀನಾಮೆ ಕೇಳುತ್ತಾರೆ ಆದರೆ ರಾಜೀನಾಮೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ಕ್ಯಾಬಿನೆಟ್‌ನಲ್ಲಿ ತಿರಸ್ಕಾರ ಮಾಡಿಸುವುದಾಗಿ ಜನರಿಗೆ ಭರವಸೆ ನೀಡಿದ್ದು, ಈ ಬಗ್ಗೆ ನುಡಿದಂತೆ ನಡೆಯಲಾಗಿದೆ. ಕಸ್ತೂರಿ ರಂಗನ್ ಯೋಜನೆ ಅವೈಜ್ಞಾನಿಕವಾಗಿದ್ದು, ನಮಗೆ ಜನರ ಹಿತ ರಕ್ಷಣೆ ಮುಖ್ಯವಾಗಿದೆ. ರಾಜಕೀಯ ಬೇಡ ಎಂದರು. ೦೧ಬಿಹೆಚ್‌ಆರ್ ೭: ಟಿ.ಡಿ.ರಾಜೇಗೌಡ

Share this article