ಪ್ರತಿಯೊಬ್ಬರೂ ಕಂಪ್ಯೂಟರ್ ಸಾಕ್ಷರತೆ ಹೊಂದುವುದು ಅಗತ್ಯ-ಕುಲಸಚಿವ ಬಸವರಾಜ

KannadaprabhaNewsNetwork | Published : Jan 14, 2025 1:01 AM

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದು, ಕೃತಕ ಬುದ್ಧಿಮತ್ತೆ ಕಾಲದಲ್ಲಿ ನಾವಿದ್ದೇವೆ. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರು ಕಂಪ್ಯೂಟರ್ ಸಾಕ್ಷರತೆ ಹೊಂದುವುದು ಅತ್ಯಗತ್ಯವಾಗಿದೆ ಎಂದು ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ ಹೇಳಿದರು.

ಹಾವೇರಿ: ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದು, ಕೃತಕ ಬುದ್ಧಿಮತ್ತೆ ಕಾಲದಲ್ಲಿ ನಾವಿದ್ದೇವೆ. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರು ಕಂಪ್ಯೂಟರ್ ಸಾಕ್ಷರತೆ ಹೊಂದುವುದು ಅತ್ಯಗತ್ಯವಾಗಿದೆ ಎಂದು ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ ಹೇಳಿದರು.ಸ್ಥಳೀಯ ಕೇರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧಿ-ಇ ತರಬೇತಿ ಉದ್ಘಾಟನೆ ಹಾಗೂ ವಿಶ್ವವಿದ್ಯಾಲಯದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಆಡುಮುಟ್ಟದ ಸೊಪ್ಪಿಲ್ಲ; ಕಂಪ್ಯೂಟರ್ ಬಳಸದ ಕ್ಷೇತ್ರವಿಲ್ಲ ಎಂಬಂತೆ ಇಂದಿನ ಬಹುತೇಕ ಕ್ಷೇತ್ರ ಕಂಪ್ಯೂಟರ್ ಅವಲಂಬಿಸಿದೆ. ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಲು ಬಿ.ಇ.,ಎಂ.ಎಸ್ಸಿ ಓದಲೇಬೇಕೆಂಬ ನಿಯಮವಿಲ್ಲ. ಸಾಮಾನ್ಯ ಜನರು ಕೂಡ ಇಂದು ಕಂಪ್ಯೂಟರ್ ಕಲಿಯಬಹುದು, ಬಳಸಲೂಬಹುದು ಎಂದರು.ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಸಾಕ್ಷರತೆ ಹೊಂದದಿದ್ದರೆ, ನಾವೆಲ್ಲರೂ ಹಿಂದುಳಿಯುತ್ತೇವೆ. ಹೀಗಾಗಿ, ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ತರಬೇತಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಜ್ಞಾನ-ಬುದ್ಧಿಯ ವ್ಯತ್ಯಾಸವಿದೆ. ಪ್ರಾಣಿಗಿಂತಲೂ ಹೆಚ್ಚಿನ ಬುದ್ದಿ-ಜ್ಞಾನವಿರುವ ಮನುಷ್ಯ ಹೆಚ್ಚು ಪರಿಶ್ರಮಪಟ್ಟು ಹೊಸದನ್ನು ಕಂಡು ಹಿಡಿಯಬೇಕು. ಇಂದಿನ ಯುಗದಲ್ಲಿ ಜ್ಞಾನವನ್ನು ಕೃತಕ ಬುದ್ಧಿ ಮತ್ತೆ ಮೂಲಕ ಯಂತ್ರಕ್ಕೆ ನೀಡುತ್ತಿದ್ದೇವೆ. ಯಂತ್ರವೇ ಅಚ್ಚುಕಟ್ಟಾಗಿ ಪ್ರತಿಕ್ರಿಯಿಸುತ್ತಿದೆ. ಯಂತ್ರಕ್ಕಿಂತಲೂ ನಾವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು. ಕಲಿಕೆಯನ್ನು ನಿಲ್ಲಿಸಬಾರದು. ಜೀವನ ಪೂರ್ತಿ ಕಲಿಯುವುದನ್ನು ಮುಂದುವರಿಸಬೇಕು ಎಂದರು.ರಿಚ್‌ಮಚ್ ಹೈಯರ್ಸ್‌ ಸಂಸ್ಥೆ ಉಪಾಧ್ಯಕ್ಷ (ಕಾರ್ಯಾಚರಣೆ) ಪ್ರಭು ಆರ್ಮುಗಂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲಗಳನ್ನು ಬೆಳೆಸಿ, ಅವರಿಗೆ ಕಂಪನಿಗಳಲ್ಲಿ ಕೆಲಸ ಕೊಡಿಸಲು ಈ ತರಬೇತಿ ರೂಪಿಸಲಾಗಿದೆ. ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಮೂರು ತಿಂಗಳ ಅವಧಿಗೆ ಮೊದಲ ಬ್ಯಾಚ್ ತರಬೇತಿ ಆರಂಭಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, 4 ಉದ್ಯಮಗಳೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ರಿಚ್‌ಮಚ್ ಹೈಯರ್ಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ತಯಾರಿ ನಡೆದಿದ್ದು, ರಾಜಭವನದಲ್ಲಿ ಕಾರ್ಯಕ್ರಮ ನಡೆಯಬೇಕಿದೆ. ಅದು ತಡವಾಗಿದ್ದರಿಂದ, ವಿದ್ಯಾರ್ಥಿಗಳ ಅನುಕೂಲಕ್ಕೆಂದು ತರಬೇತಿಯನ್ನು ಶುರುಮಾಡಲಾಗುತ್ತಿದೆ ಎಂದರು.ಶಾಲೆ-ಕಾಲೇಜು ಬಿಟ್ಟು ಬೇರೆ ಕಡೆ ಕೆಲಸ ಮಾಡುತ್ತಿರುವ ಹಾಗೂ ಮನೆಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಈ ತರಬೇತಿ ರೂಪಿಸಲಾಗಿದೆ. ಮಹಿಳೆಯರನ್ನು ಸ್ವಾವಲಂಬಿ ಮಾಡಲು, ಪ್ರಾಧ್ಯಾಪಕರನ್ನು ಶೈಕ್ಷಣಿಕವಾಗಿ ಗಟ್ಟಿಗೊಳಿಸಲು, ಹಾಲಿ ವಿದ್ಯಾರ್ಥಿಗಳ ಅಭಿವೃದ್ಧಿ ಹಾಗೂ ಅನುಭವ ಆಧಾರಿತವಾಗಿ ತರಬೇತಿ ನೀಡಲು ರಿಚ್‌ಮಚ್ ಹೈಯರ್ಸ್‌ ಸಂಸ್ಥೆ ಮುಂದೆಬಂದಿದೆ. 3 ತಿಂಗಳ ತರಬೇತಿ ಇದಾಗಿದ್ದು, ಈಗಾಗಲೇ 25 ಮಂದಿಯ ಮೊದಲ ಬ್ಯಾಚ್ ಆರಂಭಿಸಲಾಗುತ್ತಿದೆ. ತರಬೇತಿ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಸಿಗಲಿದೆ. ಜೊತೆಗೆ, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸದ ಅವಕಾಶಗಳು ಸಿಗಲಿವೆ ಎಂದು ಹೇಳಿದರು.ಹಾವೇರಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡು ಈ ವರ್ಷ ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ. ಇದನ್ನೂ ಹೆಮ್ಮೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು. ತರಬೇತುದಾರರಾದ ದೀಪಕ್ ಕರೀಗೌಡರ, ವಿಜಯಕುಮಾರ ಕೆಲೂರ, ಸಂಗೀತಾ ಬೆಳವಟ್ಟಿ ಇದ್ದರು.

Share this article