ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ಸಿದ್ಧಾರೂಢ ಮಠದಲ್ಲಿ ನಡೆದ ಭಕ್ತರ ಹಾಗೂ ಮಠದ ಟ್ರಸ್ಟ್ ಕಮಿಟಿ ಸಭೆಯಲ್ಲಿ ಮಠದ ಲೆಕ್ಕಪತ್ರ, ಶಿವರಾತ್ರಿ ಉತ್ಸವ ಆಚರಣೆ ಕುರಿತಂತೆ ತೀವ್ರ ವಾಗ್ವಾದ ನಡೆದಿದೆ. ಸಭೆಯನ್ನೇ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಶಿವರಾತ್ರಿ ಉತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಭೆಯಲ್ಲಿ ನಡೆದಿರುವ ವಾಗ್ವಾದ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ.ಪ್ರತಿ ಆರು ತಿಂಗಳಿಗೊಮ್ಮೆ ಮಠದಲ್ಲಿ ಭಕ್ತರ ಸಭೆ ಕರೆಯಲಾಗುತ್ತಿದೆ. ಒಮ್ಮೆ ಶಿವರಾತ್ರಿ ಉತ್ಸವದ ವೇಳೆ ಸಭೆ ಕರೆದರೆ, ಮತ್ತೊಂದು ಸಲ ಶ್ರಾವಣದಲ್ಲಿ ಸಭೆ ಕರೆಯಲಾಗುತ್ತದೆ. ಸಭೆಯಲ್ಲಿ ಭಕ್ತರಿಂದ ಸಲಹೆ ಸೂಚನೆ ಪಡೆದು ಅದರಂತೆ ಅಭಿವೃದ್ಧಿ ಕಾರ್ಯ, ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ.
ಅದರಂತೆ ಸಭೆ ನಡೆಯುತ್ತಿತ್ತು. ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ವರದಿ ವಾಚನ ಮುಗಿಯಿತು. ಈ ವೇಳೆ ಪೋಷಕರೊಬ್ಬರು ಎದ್ದು ಮಠದಲ್ಲಿ ಆಗುತ್ತಿರುವ ಅಭಿವೃದ್ಧಿಕಾರ್ಯಗಳ ಬಗ್ಗೆ ಪ್ರಶ್ನಿಸಿದ್ದಾರೆ. ಜತೆಗೆ ಲೆಕ್ಕಪತ್ರದ ವಿವರ ಕೇಳಿದ್ದಾರೆ. ಈಗ ಕೇಳಿರುವ ಪ್ರಶ್ನೆಗೆ ಇದೇ ಸಭೆಯಲ್ಲೇ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಅದಕ್ಕೆ ಮಹಿಳಾ ಭಕ್ತೆಯೊಬ್ಬರು, ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಕಾಮಗಾರಿ ಬಗ್ಗೆ ಲೆಕ್ಕ ಕೊಡುತ್ತಾರೆ. ಸದ್ಯ ಸಭೆ ನಡೆಯಲಿ ಎಂದು ತಿಳಿಸಿದರು. ಅದಕ್ಕೆ ಮತ್ತೊಬ್ಬ ಭಕ್ತ ಆಕ್ಷೇಪ ವ್ಯಕ್ತಪಡಿಸಿ, ಆ ಮಹಿಳೆಯ ಕೈಯಲ್ಲಿದ್ದ ಮೈಕ್‌ನ್ನು ಕಸಿದುಕೊಂಡರು.
ಅದಕ್ಕೆ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್, ಸಭೆಯಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು. ಈ ರೀತಿ ಮೈಕ್ ಕಸಿದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು. ಆಗ ಒಬ್ಬರಿಗೊಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು.ಈಗ ನಡೆಯುತ್ತಿರುವ ಕಾಮಗಾರಿಗಳ ಲೆಕ್ಕ ಕೇಳಿದರೆ ಅದ್ಹೇಗೆ ಕೊಡುವುದು. ಕಾಮಗಾರಿ ಮುಗಿದ ಬಳಿಕ ಲೆಕ್ಕ ಕೇಳಿದರೆ ಕೊಡಬಹುದು. ಆದರೆ ಇವರು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಲೆಕ್ಕ ಕೇಳಿದರೆ ಅದ್ಹೇಗೆ ಕೊಡಬೇಕು ಎಂಬ ಪ್ರಶ್ನೆ ಮಠದ ಟ್ರಸ್ಟ್ ಕಮಿಟಿದು.
ಈ ವೇಳೆ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗದಂತೆ ಅಕ್ಷರಶಃ ಗೊಂದಲಮಯವಾಯಿತು. ಬಳಿಕ ಇಷ್ಟೊಂದು ಗದ್ದಲ ಆಗುತ್ತದೆ ಎಂದರೆ ಸಭೆಯನ್ನೇ ನಡೆಸುವುದು ಬೇಡ ಎಂದು ಚೇರಮನರು ಸಭೆಯನ್ನು ಅಷ್ಟಕ್ಕೆ ಮೊಟಕುಗೊಳಿಸಿದರು. ಅದಕ್ಕೆ ಕೆಲ ಭಕ್ತರು ಎರಡು ದಿನಗಳೊಳಗೆ ಮತ್ತೊಮ್ಮೆ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹೇಳಿ ಅಲ್ಲಿಂದ ತೆರಳಿದರು.ಭಕ್ತರಲ್ಲಿ ಆತಂಕ:
ಅಜ್ಜನ ಜಾತ್ರೆಯ ಸಮೀಪವೇ ಈ ರೀತಿ ಸಭೆಯಲ್ಲಿ ವಾಗ್ವಾದ ಆಗಿರುವುದು ಮಠದ ನೈಜ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ. ಈ ರೀತಿ ಆಗಬಾರದು. ಇದು ಸರಿಯಲ್ಲ ಎಂಬ ಅಭಿಪ್ರಾಯ ಭಕ್ತರದ್ದು.