ಮುಡಾ ಕೇಸಲ್ಲಿ ಸಿಎಂಗೆ ಸಂಕಷ್ಟ - ಪ್ರಾಸಿಕ್ಯೂಷನ್‌ ಭೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Aug 01, 2024, 12:23 AM ISTUpdated : Oct 01, 2024, 07:07 AM IST
ಸಿದ್ದು | Kannada Prabha

ಸಾರಾಂಶ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದ್ದು, ಸರ್ಕಾರದಿಂದ ವರದಿ ಕೇಳಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

 ಬೆಂಗಳೂರು : ಮುಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ನೀಡಿದ ದೂರು ಮತ್ತು ಇದರ ಬೆನ್ನಲ್ಲೇ ಈ ಬಗ್ಗೆ ಸರ್ಕಾರದಿಂದ ವರದಿ ಕೇಳಿದ ರಾಜ್ಯಪಾಲರ ಕ್ರಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ನಿರ್ಮಾಣವಾಗಿದ್ದು, ಇದೀಗ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್‌ ಭೀತಿ ಎದುರಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ವರದಿ ನೀಡುವ ಬಗ್ಗೆ ಚರ್ಚೆ ನಡೆಯಲಿದ್ದು, ಬಹುತೇಕ ಪ್ರಾಸಿಕ್ಯೂಷನ್‌ ಮನವಿಯನ್ನು ತಿರಸ್ಕರಿಸುವಂತೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಒಂದು ವೇಳೆ ಸರ್ಕಾರ ಇಂತಹ ಶಿಫಾರಸು ನೀಡಿದರೂ ರಾಜ್ಯಪಾಲರು ತಮ್ಮ ವಿವೇಚನೆ ಆಧಾರದ ಮೇಲೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ವಿಪ್ಲವ ಉಂಟಾಗುವ ಸಂಭವನೀಯತೆಯೂ ನಿರ್ಮಾಣವಾಗಿದೆ.

ಮುಡಾದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು

55.80 ಕೋಟಿ ರು. ಅಕ್ರಮ ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಜುಲೈ 18ರಂದು ಮೈಸೂರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಟೆ.ಜೆ.ಅಬ್ರಹಾಂ, ಭಾರತೀಯ ನ್ಯಾಯ ಸಂಹಿತೆ- 2023ರ ಸೆಕ್ಷನ್ 218 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ- 1988ರ ಸೆಕ್ಷನ್ 17 ಎ ಮತ್ತು 19ರ ಅಡಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ರಾಜ್ಯಪಾಲರು ವರದಿ ಕೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಅಧಿಕೃತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಕುರಿತು ಸರ್ಕಾರದ ಅಭಿಪ್ರಾಯವನ್ನು ಕೇಳಿರುವುದರಿಂದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ತಿರಸ್ಕರಿಸಿ ಸಂಪುಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ಅಗತ್ಯವಿಲ್ಲ ಎಂಬ ನಿರ್ಣಯ ತೆಗೆದುಕೊಂಡರೂ ರಾಜ್ಯಪಾಲರು ಯಾವ ನಡೆ ಅನುಸರಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

 ಅಬ್ರಹಾಂ ನೀಡಿದ ದೂರಿನಲ್ಲೇನಿದೆ?

ಟೆ.ಜಿ.ಅಬ್ರಹಾಂ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ, 1998-99ರಿಂದ 2000-2001 ಅವಧಿಯವರೆಗೆ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂ.464ರ 3.16 ಎಕರೆ ಜಮೀನು ಮುಡಾ ಹೆಸರಿನಲ್ಲಿ ಪಹಣಿ ಇದ್ದರೂ 1998ರ ಮೇ 18ರಂದು ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಮುಡಾ ಹೆಸರಿನಲ್ಲಿದ್ದ ಜಮೀನನ್ನು ನಿಂಗ ಎಂಬ ಮೃತ ವ್ಯಕ್ತಿಯ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಭೂಮಿ ಮುಡಾ ಹೆಸರಿನಲ್ಲಿದ್ದ ಕಾರಣ ಮುಡಾದವರು ದೇವನೂರು ಬಡಾವಣೆ ಮೂರನೇ ಹಂತದ ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡಿ 2003-2004ರಲ್ಲೇ ನಿವೇಶನಗಳನ್ನು ಮಾಡಿ ಹಂಚಿಕೆ ಮಾಡಿದ್ದರು.

2004ರ ಆ.25ರಂದು ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಿದ್ದ ಜಮೀನನ್ನು ಬಳಿಕ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ 5.95 ಲಕ್ಷ ರು.ಗಳಿಗೆ ಖರೀದಿಸಿರುವುದಾಗಿ ಅಕ್ರಮ ಕ್ರಯಪತ್ರ ಸೃಷ್ಟಿಸಲಾಗಿದೆ. ಬಳಿಕ ಸಿದ್ದರಾಮಯ್ಯ ಅವರ ಪತ್ನಿಗೆ ದಾನ ಕ್ರಯ ಮಾಡಿದ್ದು, ಅವರು 2014ರಲ್ಲಿ ಮುಡಾ ತಮ್ಮ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಮಾರಿರುವುದರಿಂದ ಪರಿಹಾರ ನೀಡಬೇಕೆಂದು ಕೋರುತ್ತಾರೆ. 2021ರಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಸದಸ್ಯರಿರುವ ಮುಡಾ ಸಭೆಯಲ್ಲಿ ಅವರಿಗೆ ನಿಯಮಬಾಹಿರವಾಗಿ 8.24 ಕೋಟಿ ರು. ಮಾರ್ಗಸೂಚಿ ದರ ಹಾಗೂ 55.80 ಕೋಟಿ ರು. ಮಾರುಕಟ್ಟೆ ಮೌಲ್ಯದ 14 ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ.

ಈ ಬಗ್ಗೆ ಎಲ್ಲಾ ದಾಖಲೆ ಸಲ್ಲಿಸಿದ್ದು, ಅಪರಾಧಿಕ ಒಳಸಂಚು, ವಂಚನೆ, ಭ್ರಷ್ಟಾಚಾರ, ಅಪರಾಧಿಕ ದುರ್ನಡತೆ, ಅಪ್ರಾಮಾಣಿಕತೆ, ರಾಜ್ಯದ ಹಣಕಾಸು ದುರ್ಬಳಕೆ ಅಡಿಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

 ಸಚಿವರೊಂದಿಗೆ ಇಂದು ಸಿಎಂ ಉಪಾಹಾರ ಸಭೆ

ಪ್ರಾಸಿಕ್ಯೂಷನ್‌ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿದ್ದಾರೆ. ಈ ವೇಳೆ ಪ್ರಾಸಿಕ್ಯೂಷನ್‌ ಬಗ್ಗೆ ವರದಿ ಕೇಳಿರುವ ರಾಜ್ಯಪಾಲರ ನಡೆ ಬಗ್ಗೆ ಯಾವ ಕ್ರಮ ಅನುಸರಿಸಬಹುದು ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

----

ಬಿಎಸ್‌ವೈಗೆ ಸಂಕಷ್ಟ ಒಡ್ಡಿದ್ದ ಪ್ರಾಸಿಕ್ಯೂಷನ್‌ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ವಕೀಲರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ 2010ರಲ್ಲಿ ಮನವಿ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಲು ಸಂಪುಟ ನಿರ್ಧರಿಸಿದ್ದರೂ, ಭಾರದ್ವಾಜ್ ಅವರು ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಹೈಕೋರ್ಟ್‌ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ್ದ ಅನುಮತಿ ರದ್ದುಪಡಿಸಿತ್ತಾದರೂ ಆ ವೇಳೆಗೆ ಹಲವು ಬೆಳವಣಿಗೆ ನಡೆದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!