ನರಗುಂದ ಪಟ್ಟಣದಲ್ಲಿ ಒಂದೆಡೆ ಹಾಹಾಕಾರ, ಇನ್ನೊಂದೆಡೆ ಪೋಲು

KannadaprabhaNewsNetwork |  
Published : Mar 21, 2026, 02:15 AM IST
(18ಎನ್.ಆರ್.ಡಿ4 ನಲ್ಲೆ ಶುದ್ದ ಕುಡಿಯುವ ನೀರು ವೈರ್ಥವಾಗಿ ಚರಂಡಿಗೆ ಹರಿಯುತ್ತದೆ.)  | Kannada Prabha

ಸಾರಾಂಶ

ಪಟ್ಟಣದಲ್ಲಿ ಈ ಮೊದಲು ಪ್ರತಿ 5 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ಆದರೆ ಬೇಸಿಗೆ ಪ್ರಾರಂಭವಾದಾಗಿನಿಂದ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದೆ. ಇದರಿಂದ ಜೀವಜಲಕ್ಕೆ ತತ್ವಾರ ಉಂಟಾಗಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಈಗಾಗಲೇ ಬಿಸಿಲಿನ ಧಗೆ ಎಲ್ಲೆಡೆ ತನ್ನ ಪ್ರತಾಪ ತೋರುತ್ತಿದೆ. ಹೀಗಾಗಿ ಪಟ್ಟಣದ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದು ಕಾಣುತ್ತಿದ್ದು, ಇನ್ನೊಂದೆಡೆ ಕೆಲವು ವಾರ್ಡಗಳಲ್ಲಿ ನಿವಾಸಿಗಳು ನಲ್ಲಿಗಳ ನೀರನ್ನು ವ್ಯರ್ಥವಾಗಿ ಚರಂಡಿಗೆ ಹರಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಮಲಪ್ರಭಾ ಜಲಾಶಯದಿಂದ 35 ಕಿಮೀ ಪೈಪಲೈನ್ ಮೂಲಕ ಪ್ರತಿದಿನ ಪುರಸಭೆ ವ್ಯಾಪ್ತಿಯ 23 ವಾರ್ಡಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು 9 ಸಾವಿರ ನೀರು ಪೂರೈಕೆಯ ನಲ್ಲಿಗಳಿವೆ. ಜನರು ಈ ನಲ್ಲಿಗಳಲ್ಲಿ ನೀರು ಸಂಗ್ರಹಿಸಿಕೊಂಡು ನಂತರ ವಾಲ್ವ್ ಬಂದ್ ಮಾಡದ್ದರಿಂದ ಅಮೂಲ್ಯವಾದ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ.

ಪಟ್ಟಣದಲ್ಲಿ ಈ ಮೊದಲು ಪ್ರತಿ 5 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ಆದರೆ ಬೇಸಿಗೆ ಪ್ರಾರಂಭವಾದಾಗಿನಿಂದ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದೆ. ಇದರಿಂದ ಜೀವಜಲಕ್ಕೆ ತತ್ವಾರ ಉಂಟಾಗಿದೆ. ಸರ್ಕಾರ ನೂರಾರು ಕೋಟಿ ಖರ್ಚು ಮಾಡಿ ಪಟ್ಟಣಕ್ಕೆ 24x7 ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಕೆ ಆಗುತ್ತಿದೆ. ಆದರೆ ಯೋಜನೆ ಕಾಮಗಾರಿ ಮಾಡುವ ಸಂದರ್ಭದಲ್ಲಿ 300 ಮೀಟರಗೊಂದು ಏರವಾಲ್ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹುಲಿಕಟ್ಟಿ, ಮಣಿಕಟ್ಟಿ, ಹಳೇಕಟ್ಟಿ ಗ್ರಾಮದವರು ಏರವಾಲ್ ಖುಲ್ಲಾ ಮಾಡಿ ತಮ್ಮ ಗ್ರಾಮಗಳಿಗೆ ನೀರು ಪಡೆಯುತ್ತಿದ್ದಾರೆ. ಹೀಗಾಗಿ ಬೇಸಿಗೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಹಾಹಾಕಾರ ಆಗುತ್ತಿದೆ ಎಂದು ಪುರಸಭೆ ನೀರು ಪೂರೈಕೆ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಯೋಜನವಾಗಿಲ್ಲ: ಸಾರ್ವಜನಿಕರು ತಮಗೆ ಬೇಕಾದಷ್ಟು ನೀರು ಪಡೆದುಕೊಂಡ ನಂತರ ನಲ್ಲಿಗಳಿಗೆ ಏರವಾಲ್ ಹಾಕಿ ಬಂದ್ ಮಾಡಬೇಕೆಂದು ಉಚಿತವಾಗಿ ವಾಲ್ ನೀಡಿದ್ದಾರೆ. ಆದರೂ ಸಾರ್ವಜನಿಕರು ನಲ್ಲಿಗಳಿಗೆ ವಾಲ್ ಹಾಕದ್ದರಿಂದ ನೀರು ಚರಂಡಿ ಪಾಲಾಗುತ್ತಿದೆ.

ಆರೋಪ: ಪುರಸಭೆ ಸಿಬ್ಬಂದಿ ಪಟ್ಟಣದಿಂದ ಸ್ವಲ್ಪ ದೂರವಿರುವ ವಾಜಪೇಯ ನಗರ, ಕೃಷ್ಣನಗರ, ಬಸವೇಶ್ವರ ನಗರ, ಅಲ್ಲಿಬಾಯಿ ನಗರ, ರಾಚಯ್ಯ ನಗರ ಸೇರಿದಂತೆ ಇನ್ನು ಕೆಲವು ಬಡಾವಣೆಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವಾರ್ಡನ ನಿವಾಸಿಗಳು ಬೇರೆಡೆ ಹೋಗಿ ನೀರು ತರುವ ಪರಿಸ್ಥಿತಿಯಿದೆ.

ಕುಡಿಯುವ ನೀರು ಪೂರೈಕೆ ಮಾಡುವ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲ. ಆದ್ದರಿಂದ ಪುರಸಭೆಯವರು ಪ್ರತಿ 5 ದಿನಕ್ಕೊಮ್ಮೆ ಪ್ರತಿ ವಾರ್ಡಗಳಿಗೆ ನೀರು ಪೂರೈಕೆ ಮಾಡಬೇಕೆಂದು ವಿವೇಕಾನಂದ ನಗರದ ಚಂದ್ರಗೌಡ ಪಾಟೀಲ ಪ್ಲಾಟಿನ ನಿವಾಸಿಗಳಾದ ಪ್ರಕಾಶ ಡಂಬಳ, ದತ್ತು ಜೋಗಣ್ಣವರ ಆಗ್ರಹಿಸಿದರು.

ಬೇಸರ: ಕುಡಿಯುವ ನೀರನ್ನು ಜನರು ಮಿತವಾಗಿ ಬಳಕೆ ಮಾಡಬೇಕು. ನೀರು ಸಾಕಾದ ನಂತರ ಕಡ್ಡಾಯವಾಗಿ ನಲ್ಲಿಗಳನ್ನು ಬಂದ್ ಮಾಡಬೇಕೆಂದು ತಿಳಿಸಿದ್ದೇವೆ. ಆದರೂ ಸಾರ್ವಜನಿಕರು ಸಹಕಾರ ನೀಡದಿರುವುದು ಬೇಸರ ತಂದಿದೆ ಎಂದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸಿಯಾ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯ: ಬಿಷಪ್ ಜೆರಾಲ್ಡ್ ಲೋಬೊ
ಶರಣರ ತತ್ವಗಳು ಬದುಕಿಗೆ ಪ್ರೇರಣೆ: ಡಾ. ಸವಿತಾ ಸಿದ್ದನೂರ