ಹೊಸಪೇಟೆ: ವಿಜಯನಗರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ದಿಢೀರ್ ಕುಸಿತ ಕಂಡಿದ್ದು, ಶಿಕ್ಷಣ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಅದರಲ್ಲೂ ಪೋಷಕರು ಕೂಡ ಆತಂಕ್ಕೀಡಾಗಿದ್ದಾರೆ.
ವೆಬ್‌ಕಾಸ್ಟಿಂಗ್‌ನಿಂದ ಫಲಿತಾಂಶ ಕುಸಿತವಾಯಿತು ಎಂದು ಹೇಳುವುದು ಮೂರ್ಖತನ. ಹೀಗೆ ಹೇಳಿದ್ದೇ ಆದರೆ ಈ ಹಿಂದೆ ಸಾಮೂಹಿಕ ನಕಲು ನಡೆಯುತ್ತಿತ್ತು. ಶಾಲೆಗಳ ಘನತೆಯನ್ನು ಉಳಿಸುವುದಕ್ಕಾಗಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದರು ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಕಳೆದ ಬಾರಿ ಹತ್ತನೇ ಸ್ಥಾನ:ವಿಜಯನಗರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ವರ್ಷ 10ನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿರಬಹುದು. ಆದರೆ, ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಫಲಿತಾಂಶ ಮಾತ್ರ ಭಾರೀ ಕನಿಷ್ಠ ಮಟ್ಟದಲ್ಲಿದೆ. ಈ ವಿಷಯದಲ್ಲಿ ಈಗ ಶಿಕ್ಷಣ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಕೂಡ ಈ ಬಾರಿ ಕುಸಿದಿದೆ. ಶಾಲೆಗಳಲ್ಲಿ 20 ಅಂಕಗಳನ್ನು ಪ್ರಾಯೋಗಿಕ ವಿಷಯದಲ್ಲಿರುತ್ತದೆ. ಇನ್ನು 80 ಅಂಕ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಇದ್ದರೂ ಈ 80 ಅಂಕಗಳಿಗೆ ಬಾಲಕ, ಬಾಲಕಿಯರು ಸರಿಯಾಗಿ ಉತ್ತರ ಬರೆದಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿಲ್ಲವೇ ಎಂಬ ಪ್ರಶ್ನೆ ಈಗ ಎದುರಾಗಿದೆ.ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು, ವೆಬ್‌ಕಾಸ್ಟಿಂಗ್ ಮೂಲಕ ಸಿಕ್ಕಿಬಿದ್ದು ಹತ್ತಾರು ಶಿಕ್ಷಕರು ಅಮಾನತುಗೊಂಡಿದ್ದಾರೆ. ಈ ವಿಷಯ ಜಿಲ್ಲೆಯ ಶಿಕ್ಷಕರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗಾಗಿ ಈ ಬಾರಿ ಶಿಕ್ಷಕರೇ ನೆರವಾಗುವ ಪ್ರಮಾಣ ಕಡಿಮೆಯಾದಂತಿದೆ. ವಿದ್ಯಾರ್ಥಿಗಳಿಗೂ ಅಷ್ಟೇ, ಸಿಸಿಟಿವಿ ಕ್ಯಾಮೆರಾ ಇದ್ದ ಕಾರಣ ನಕಲು ಮಾಡಲು ಭಯಬಿದ್ದರು. ಇದೆಲ್ಲದರ ಫಲವಾಗಿ ಫಲಿತಾಂಶದಲ್ಲಿ ಕುಸಿತವಾಗಿದೆ. ಇದೇ ವ್ಯವಸ್ಥೆ ಮುಂದುವರಿದರೆ ನಾಲ್ಕೈದು ವರ್ಷಗಳಲ್ಲಿ ವಿಜಯನಗರ ಜಿಲ್ಲೆಯಲ್ಲೂ ಶಿಕ್ಷಣ ವ್ಯವಸ್ಥೆ ಬಹಳಷ್ಟು ಸುಧಾರಣೆ ಆಗಲಿದೆ ಎಂದು ಹೇಳುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.
ಇನ್ನು ಜಿಲ್ಲೆಯ ಗ್ರಾಮೀಣ ತಾಲೂಕುಗಳಿಗಿಂತ ಜಿಲ್ಲಾ ಕೇಂದ್ರ ಹೊಸಪೇಟೆ ಕೊನೆಯ ಸ್ಥಾನಕ್ಕೆ ಇಳಿದಿದೆ. ನಗರದಲ್ಲೇ ಶಿಕ್ಷಣ ಸರಿಯಾಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಂದು ಕಡೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಶಯವನ್ನು ಪಾಲಕರು ಹೊಂದಿದ್ದರೆ, ಇತ್ತ ಜಿಲ್ಲೆ ಫಲಿತಾಂಶ ಕುಸಿದಿರುವುದು ಈಗ ಪಾಲಕರನ್ನು ಚಿಂತೆಗೀಡು ಮಾಡಿದೆ. ಹಾಗಾಗಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚಿಂತಿತರಾಗಿದ್ದಾರೆ.ವಿಜಯನಗರ ಜಿಲ್ಲೆಯ ಫಲಿತಾಂಶ ಕಳೆದ ಬಾರಿ ಹತ್ತನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶ ಕುಸಿದಿದೆ. ಫಲಿತಾಂಶ ಕುಸಿಯಲು ಏನೂ ಕಾರಣ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.
ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಭಾರೀ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ವೆಬ್ ಕಾಸ್ಟಿಂಗ್, ಸಿಸಿ ಕ್ಯಾಮೆರಾ ಇದ್ದರೂ ಮಕ್ಕಳು ಭಯ ಬೀಳದೇ ಪರೀಕ್ಷೆ ಎದುರಿಸುವಂತೆ ಸಿದ್ಧ ಮಾಡಬೇಕು. ಶಿಕ್ಷಕರು ಬೇರೆ ಕೆಲಸ ಹಚ್ಚುತ್ತಾರೆ ಎಂಬ ನೆಪವೊಡ್ಡದೇ ಮಕ್ಕಳ ಶಿಕ್ಷಣದ ಕಡೆಗೆ ಆದ್ಯತೆ ಕೊಡಬೇಕು ಎನ್ನುತ್ತಾರೆ ಶಿಕ್ಷಣಪ್ರೇಮಿ ಹೊಸಪೇಟೆ ಆರ್. ಭಾಸ್ಕರ್ ರೆಡ್ಡಿ.ವಿಜಯನಗರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿದೆ. ಇದರಿಂದ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಾಗಿದೆ. ಹಾಗಾಗಿ ಈ ಸಲ ಮಂಗಳೂರು ಇಲ್ಲವೇ ಉಡುಪಿ ಜಿಲ್ಲೆಯಲ್ಲಿ ಹಾಸ್ಟೆಲ್ ಗಳಲ್ಲಿ ಮಕ್ಕಳನ್ನು ಸೇರಿಸಿ ಓದಿಸೋಣ ಎಂದು ಕೊಂಡಿದ್ದೇವೆ ಎನ್ನುತ್ತಾರೆ ಮಕ್ಕಳ ಪಾಲಕ ಮಣಿಕಂಠ.