ಅಸಮರ್ಪಕ ಬರ ಪರಿಹಾರ: ಹಣ ಸಂಗ್ರಹಿಸಿಸರ್ಕಾರಕ್ಕೆ ನೀಡಲು ಮುಂದಾದ ರೈತರು

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಬರ ಪರಿಹಾರವಾಗಿ 2 ಸಾವಿರ ರುಪಾಯಿ ನೀಡಿರುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರ ನಡೆಸಲು ಸಿಎಂ, ಡಿಸಿಎಂಗೆ ನೀಡಲೆಂದು ಹಣ ಸಂಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆಯಿತು. ರೈತ ಮುಖಂಡರಾದ ಎಂ.ಎನ್. ನಾಯಕ್ ಹಾಗೂ ಮಾಲತೇಶ ಪೂಜಾರ ನೇತೃತ್ವದಲ್ಲಿ ಸವಣೂರು ತಹಸೀಲ್ದಾರ್ ಕಚೇರಿ ಎದುರು ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸವಣೂರು

ಬರ ಪರಿಹಾರವಾಗಿ ₹2 ಸಾವಿರ ನೀಡಿರುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರ ನಡೆಸಲು ಸಿಎಂ, ಡಿಸಿಎಂಗೆ ನೀಡಲೆಂದು ಹಣ ಸಂಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆಯಿತು.

ರೈತ ಮುಖಂಡರಾದ ಎಂ.ಎನ್. ನಾಯಕ್ ಹಾಗೂ ಮಾಲತೇಶ ಪೂಜಾರ ನೇತೃತ್ವದಲ್ಲಿ ಸವಣೂರು ತಹಸೀಲ್ದಾರ್ ಕಚೇರಿ ಎದುರು ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದರೂ ಇದುವರೆಗೆ ರೈತರಿಗೆ ಪರಿಹಾರ ನೀಡಿಲ್ಲ. ಈಗ ರೈತರ ಖಾತೆಗೆ ಕೇವಲ ₹2 ಸಾವಿರ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿ ರೈತರು ಒಂದೊಂದು ಸಾವಿರದಂತೆ ಸುಮಾರು ₹30 ಸಾವಿರ ದೇಣಿಗೆ ಸಂಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ನೀಡಲು ನಿರ್ಧರಿಸಿದರು. ಸಂಗ್ರಹಿಸಿದ ಹಣವನ್ನು ಉಪವಿಭಾಗಾಧಿಕಾರಿ ಮಹಮ್ಮದ್‌ ಖಿಜರ್‌, ತಹಸೀಲ್ದಾರ್‌ ಭರತ್‌ ಅವರಿಗೆ ನೀಡಲು ಮುಂದಾದರು. ಆದರೆ, ಮನವಿಯನ್ನು ಮಾತ್ರ ಸ್ವೀಕರಿಸಲು ಒಪ್ಪಿದ ಅಧಿಕಾರಿಗಳು, ಹಣ ಪಡೆಯಲು ನಿರಾಕರಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ, ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಿತ್ತಾಟದಲ್ಲಿ ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕೇಂದ್ರ ಸರ್ಕಾರ ಹೆಕ್ಟೇರ್‌ಗೆ ₹8 ಸಾವಿರ ಮತ್ತು ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು ಸೇರಿಸಿ ಪ್ರತಿ ಹೆಕ್ಟೇರ್‌ಗೆ ₹16 ಸಾವಿರ ಬರ ಪರಿಹಾರ ನೀಡಬೇಕು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಶೀಘ್ರದಲ್ಲಿ ಬರ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಮುಖಂಡ ಎಂ.ಎನ್‌. ನಾಯಕ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಭಿಕ್ಷೆ ನೀಡುವ ರೀತಿಯಲ್ಲಿ ₹2 ಸಾವಿರ ಪರಿಹಾರ ಹಾಕುತ್ತಿದೆ. ರಾಜ್ಯ ಸರ್ಕಾರವು ಪರಿಹಾರ ನೀಡಿ ರೈತರನ್ನು ಉಳಿಸುತ್ತಿಲ್ಲ, ಬದಲಾಗಿ ₹2 ಸಾವಿರ ನೀಡಿ ವಿಷ ತೆಗೆದುಕೊಳ್ಳುವಂತೆ ಮಾಡುತ್ತಿದೆ. ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನಪ್ಪ ಮರಡೂರ್, ಸಂಗಮೇಶ್ ಪಿತಾಂಬರಶೆಟ್ಟಿ, ನೂರ್ ಅಹಮದ್ ಮುಲ್ಲಾ, ಜಗದೀಶ್ ಬಳ್ಳಾರಿ, ಅಬ್ದುಲ್ ಖಾದರ್, ನಾಗಪ್ಪ ಹಡಪದ, ರಾಜಶೇಖರ ಕುಳೇನೂರ, ಶೇಖರಗೌಡ ಪಾಟೀಲ, ಬಸನಗೌಡ ಅರಳಿಹಳ್ಳಿ, ಮಹದೇವಪ್ಪ ಆಲದಕಟ್ಟಿ, ರಾಜು ತರ್ಲಘಟ್ಟ ಇತರರು ಇದ್ದರು.

Share this article