ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಲಯನ್ಸ್ ಕ್ಲಬ್ ಜಗತ್ತಿನ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿದೆ. ಸಮಾಜ ಸೇವೆ ಪ್ರಮುಖ ಧ್ಯೇಯವಾಗಿರುವ ಸಂಸ್ಥೆಯು ದೇಶದ ಮೂಲೆಮೂಲೆ ಹಳ್ಳಿಹಳ್ಳಿಗಳಿಗೆ ಕಾರ್ಯಚಟುವಟಿಕೆ ವಿಸ್ತರಿಸಿದೆ. ಆ ಮೂಲಕ ಅತ್ಯಂತ ಜನಪ್ರಿಯ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಲಯನ್ಸ್ ಡಿ.317 ಸಿ ಜಿಲ್ಲಾ ಗವರ್ನರ್ ಲ.ನೇರಿ ಕರ್ನೇಲಿಯೋ ಹೇಳಿದರು.ಸೋಮವಾರ ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1917 ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ಮೆರ್ಲಿನ್ ಜೋನ್ಸ್ ನೇತೃತ್ವದಲ್ಲಿ ಆರಂಭವಾದ ಸಂಸ್ಥೆ ಇದೀಗ ಜಗತ್ತಿನ 210 ಅಧಿಕ ರಾಷ್ಟ್ರಗಳಲ್ಲಿ 47.5 ಸಾವಿರ ಕ್ಲಬ್ ಮೂಲಕ 14 ಲಕ್ಷ ಸದಸ್ಯರನ್ನು ಹೊಂದಿರುವ ಬೃಹತ್ ಸ್ವಯಂ ಸೇವಾ ಸಂಸ್ಥೆಯಾಗಿದೆ. ವಿಶ್ವ ಸಂಸ್ಥೆಯ ಮೂಲಕ ಮಾನ್ಯತೆ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಳಿಸಿದರು.
ಹಲವಾರು ಸೇವೆ:ಡಿ.317 ಸಿ ಕಂದಾಯ ಜಿಲ್ಲೆಯು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನು ಒಳಗೊಂಡಿದ್ದು, ವ್ಯಾಪ್ತಿಯಲ್ಲಿನ 118 ಕ್ಲಬ್‌ಗಳಲ್ಲಿ 3160 ಸದಸ್ಯರು 2 ಬ್ಲಡ್ ಬ್ಯಾಂಕ್ ಮೂಲಕ 6600 ಯೂನಿಟ್ ರಕ್ತವನ್ನು ಬಡವರಿಗೆ ಅಶಕ್ತರಿಗೆ ವಿತರಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 7 ಶಿಕ್ಷಣ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಶಿಕಾರಿಪುರದ ಬನಸಿರಿ ಲಯನ್ಸ್ ಎಜುಕೇಷನಲ್ ಸೊಸೈಟಿಯಲ್ಲಿ ನುರಿತ 105 ಶಿಕ್ಷಕರು, 40ಕ್ಕೂ ಅಧಿಕ ಸಿಬ್ಬಂದಿ, 1850ಕ್ಕೂ ಅಧಿಕ ವಿದ್ಯಾರ್ಥಿಗಳ ಬಹು ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಅತ್ಯುತ್ತಮ ಫಲಿತಾಂಶದ ಮೂಲಕ ಮುಂಚೂಣಿಯಲ್ಲಿದೆ ಎಂದು ಪ್ರಶಂಸಿಸಿದರು.
ಕ್ಲಬ್ ಸೇವಾ ಕಾರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಈ ದಿಸೆಯಲ್ಲಿ ಈಗಾಗಲೇ ಮಧುಮೇಹ ಶಿಬಿರ, ಕಣ್ಣು ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ, ಮಕ್ಕಳ ರಕ್ತದ ಗುಂಪು, ಶಿಕ್ಷಕರ ತರಬೇತಿ ಕಾರ್ಯಾಗಾರ, ಹದಿಹರಯದ ಮಕ್ಕಳಿಗೆ ಅರಿವು ಕಾರ್ಯಾಗಾರ, ಹಸಿದವರಿಗೆ ಅನ್ನ, ಊಟ, ಉಪಚಾರ, ಡಯಾಲಸಿಸ್ ರೋಗಿಗಳಿಗೆ ಚಿಕಿತ್ಸೆ, ಪರಿಸರ ಸಂರಕ್ಷಣೆ ಮತ್ತಿತರ ಸೇವಾ ಕಾರ್ಯದ ಮೂಲಕ ಡಿ.317 ಸಿ ಜಿಲ್ಲೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ರೋಗಿಗಳಿಗೆ ಊಟ:
ವಾರದಲ್ಲಿ 2 ದಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿನ 250ಕ್ಕೂ ಅಧಿಕ ರೋಗಿಗಳಿಗೆ ಸುದೀರ್ಘ ಕಾಲದಿಂದ ಊಟ ವಿತರಿಸುತ್ತಿರುವ ಶಿಕಾರಿಪುರ ಕ್ಲಬ್ ಸೇವಾ ಕಾರ್ಯ ಮಾದರಿಯಾಗಿದೆ. ಅಂಗನವಾಡಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು, ಲಯನ್ಸ್ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಿಸಿ ಗವರ್ನರ್ ಬೇಟಿ ಕಾರ್ಯಕ್ರಮ ಮೆರಗು ಹೆಚ್ಚಿಸಲಾಗಿದೆ. ಪ್ರತಿಫಲಾಪೇಕ್ಷೆ ಇಲ್ಲದ ಸಮಾಜಸೇವೆ ಸಂಸ್ಥೆ ಕಾರ್ಯ ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ಅಂತರ ರಾಷ್ಟ್ರೀಯ ಲಯನ್ಸ್ ಅಧ್ಯಕ್ಷೆ ಲ. ಡಾ.ಪ್ಯಾಥಿಹಿಲ್ ಅವರ ಸೇವಾಕಾರ್ಯದ ಮೂಲಕ ಜಗತ್ತು ಬದಲಾಯಿಸಿ ಎಂಬ ಧ್ಯೇಯವಾಕ್ಯದಡಿ ಸೇವೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಕ್ಲಬ್ ಅಧ್ಯಕ್ಷೆ ಮಮತಾ ಬಾಲಚಂದ್ರ, ಜಿಲ್ಲಾ ಪ್ರಥಮ ಮಹಿಳೆ ಅನಿಲಿಯ ಫಿಲೋಮಿನಾ ಕರ್ನೇಲಿಯೋ, ರಾಘವೇಂದ್ರ ಸಾನು, ಶಿವಾನಂದ ಸಾನು, ಡಿ.ಕೆ. ಮಲ್ಲಿಕಾರ್ಜುನ, ಡಾ.ಜಯಪ್ಪ, ಕರಿಬಸಪ್ಪ, ಮೋಹನ್ ಸಾನು, ಗದಿಗೆಪ್ಪ, ಜಯಣ್ಣ ಹಂಚಿನಮನೆ, ವಿಶ್ವನಾಥ ಶಾಸ್ತ್ರಿ, ಓಂಕಾರ ಶಾಸ್ತ್ರಿ, ಪಾಂಡುರಂಗ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.
- - - ಕೋಟ್ ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆ ಲಯನ್ಸ್ ಕ್ಲಬ್‌ನಲ್ಲಿ ಜಾತಿ, ಮತ, ಲಿಂಗಭೇದವಿಲ್ಲದೇ ಪ್ರತಿಯೊಬ್ಬರೂ ಸದಸ್ಯರಾಗಲು ಅವಕಾಶವಿದೆ. ದುಡಿಮೆಯ ಸಣ್ಣ ಭಾಗವನ್ನು ವಿನಿಯೋಗಿಸಲಾಗುತ್ತದೆ. ಪ್ರವಾಹ, ಬರಗಾಲ, ಅತಿವೃಷ್ಠಿ ಮತ್ತಿತರ ಪ್ರಕೃತಿ ವಿಕೋಪ ಸಂದರ್ಭ ಅಂತರ ರಾಷ್ಟ್ರೀಯ ಸಂಸ್ಥೆ ಅನುದಾನ ನೀಡಲಿದೆ- ರವಿರಾಜ ನಾಯ್ಕ, ಜಿಲ್ಲಾ ಕಾರ್ಯದರ್ಶಿ
- - - -11ಕೆ.ಎಸ್.ಕೆಪಿ1:ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಲಯನ್ಸ್ ಡಿ.317 ಸಿ ಜಿಲ್ಲಾ ಗವರ್ನರ್ ಲ.ನೇರಿ ಕರ್ನೇಲಿಯೋ ಮಾತನಾಡಿದರು.