ಬಿಸಿಯೂಟ ಅಸಮರ್ಪಕ: ಹನುಮಸಾಗರದಲ್ಲಿ ಪಾಲಕರು-ಶಾಲೆ ಅಡುಗೆ ಸಿಬ್ಬಂದಿ ವಾಗ್ವಾದ

KannadaprabhaNewsNetwork |  
Published : Feb 28, 2026, 02:30 AM IST
ಹನುಮಸಾಗರದ ಪಟ್ಟಣದ ಕೆಪಿಎಸ್ ಉರ್ದು ಶಾಲೆ ಹಾಗೂ ಮೌಲಾನಾ ಅಜಾದ್ ಶಾಲೆಯಲ್ಲಿ ಪಾಲಕರು ಹಾಗೂ ಅಡುಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು. | Kannada Prabha

ಸಾರಾಂಶ

ಹನುಮಸಾಗರ ಪಟ್ಟಣದ ಕೆಪಿಎಸ್ ಉರ್ದು ಶಾಲೆ ಹಾಗೂ ಮೌಲಾನಾ ಅಜಾದ್ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಹಾಲು ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಕರು ಹಾಗೂ ಶಾಲಾ ಅಡುಗೆದಾರರ ನಡುವೆ ವಾಗ್ವಾದ ನಡೆಯಿತು.

ಹನುಮಸಾಗರ: ಪಟ್ಟಣದ ಕೆಪಿಎಸ್ ಉರ್ದು ಶಾಲೆ ಹಾಗೂ ಮೌಲಾನಾ ಅಜಾದ್ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಹಾಲು ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಕರು ಹಾಗೂ ಶಾಲಾ ಅಡುಗೆದಾರರ ನಡುವೆ ವಾಗ್ವಾದ ನಡೆಯಿತು.ಕೆಪಿಎಸ್ ಆವರಣದಲ್ಲಿ ನಡೆಯುತ್ತಿರುವ ಉರ್ದು ಶಾಲೆ ಹಾಗೂ ಮೌಲಾನಾ ಅಜಾದ್ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದ ಮಧ್ಯಾಹ್ನದ ಊಟ ಯೋಜನೆಯಡಿ ಬಿಸಿಯೂಟ ಹಾಗೂ ಹಾಲು ವಿತರಿಸಲಾಗುತ್ತಿದೆ. ಆದರೆ ಕೆಲವು ದಿನಗಳಿಂದ ಊಟ ಸರಿಯಾಗಿ ಸಿಗುತ್ತಿಲ್ಲ, ಪ್ರಮಾಣ ಕಡಿಮೆ ಇದೆ, ರುಚಿಕಟ್ಟಾಗಿ ತಯಾರಿಸಲಾಗುತ್ತಿಲ್ಲ ಹಾಗೂ ಸ್ವಚ್ಛತೆಯ ಕೊರತೆ ಇದೆ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವೊಮ್ಮೆ ಅನ್ನ ಸರಿಯಾಗಿ ಬೇಯದಿರುವುದು, ಸಾಂಬಾರಿನಲ್ಲಿ ರುಚಿ ಇಲ್ಲದಿರುವುದು, ಹಾಲಿನ ಪ್ರಮಾಣ ಕಡಿಮೆಯಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ದಿನಗಳ ಹಿಂದೆ ಹುಳು ಕಾಣಿಸಿಕೊಂಡಿದ್ದರೂ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೆಲವು ಪಾಲಕರು ಶಾಲೆಗೆ ಭೇಟಿ ನೀಡಿ ಅಡುಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರ ಮಕ್ಕಳ ಪೌಷ್ಟಿಕಾಂಶಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿದೆ. ಆದರೆ ಶಾಲಾ ಮಟ್ಟದಲ್ಲಿ ಅಜಾಗರೂಕತೆ ನಡೆಯಬಾರದು. ಮಕ್ಕಳ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಡುಗೆ ಸ್ವಚ್ಛತೆಯಿಂದ, ರುಚಿಕಟ್ಟಾಗಿ ಮತ್ತು ಸಮರ್ಪಕ ಪ್ರಮಾಣದಲ್ಲಿ ತಯಾರಿಸಿ ನೀಡಬೇಕು ಎಂದು ಪಾಲಕರು ಆಗ್ರಹಿಸಿದರು.

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್‌ಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಪರಿಸ್ಥಿತಿ ತಿಳಿಗೊಳಿಸಿದರು. ಅಡುಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಇನ್ನು ಮುಂದೆ ಈ ರೀತಿಯ ನಿರ್ಲಕ್ಷ್ಯ ನಡೆಯಬಾರದು, ಊಟದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಆರೋಗ್ಯವೇ ಮೊದಲ ಆದ್ಯತೆ ಎಂಬುದನ್ನು ಮನಗಾಣಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಯಿತು.

ಈ ಸಂಬಂಧ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಂದಿನ ದಿನಗಳಲ್ಲಿ ಊಟದ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದಾಗಿ ಹಾಗೂ ಯಾವುದೇ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಷ್ಟಪಟ್ಟು ದುಡಿದರೂ ರೈತರಿಗೆ ತಪ್ಪದ ಸಂಕಷ್ಟ: ಯು. ಬಸವರಾಜ
ಅಘನಾಶಿನಿ ವೇದಾವತಿ ಜೋಡಣೆ ವಿರುದ್ಧ ನಿರಂತರ ಹೋರಾಟ