ಎಸ್.ಜಿ. ತೆಗ್ಗಿನಮನಿ
ಪುರಸಭೆ ವ್ಯಾಪ್ತಿಗೆ ಕಸ, ಚರಂಡಿ ಸ್ವಚ್ಛತೆಗೆ 60 ಪೌರಕಾರ್ಮಿಕರ ಇರಬೇಕು. ಆದರೆ ಕೇವಲ 31 ಕಾರ್ಮಿಕರು ಇದ್ದಾರೆ. ಅದರಲ್ಲಿ 29 ಕಾಯಂ ಕಾರ್ಮಿಕರು, 2 ಜನ ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ 13 ವಾಹನಗಳಿವೆ. ಇವುಗಳ ಚಾಲನೆಗೆ 11 ಜನ ಮಾತ್ರ ವಾಹನ ಚಾಲಕರು ಇದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಬಹುತೇಕ ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಕಸ, ಗಿಡಗಂಟಿಗಳು ಹಾಗೂ ಮಳೆ ನೀರು ನಿಂತ ಪರಿಣಾಮ ಗಬ್ಬೆದ್ದು ದುರ್ವಾಸನೆ ಬೀರುತ್ತಿವೆ. ಮಳೆನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಘೀ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಜಾಲಿ ಕಂಟಿ: ರಸ್ತೆಬದಿ ಕಸ ಎಸೆಯುವುದು ಸಾಮಾನ್ಯ. ಖಾಲಿ ನಿವೇಶನಗಳಲ್ಲಿ ಜಾಲಿ ಕಂಟಿ ಬೆಳೆದು ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡುವುದು, ಕಸ ತೆರವುಗೊಳಿಸುವುದು, ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ಸೊಳ್ಳೆ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಿಸುವಂಥ ಕ್ರಮ ಆಗುತ್ತಿಲ್ಲ.
ಪಟ್ಟಣದ ಚರಂಡಿ ಮತ್ತು ಕಸ ವಿಲೇವಾರಿ ಮಾಡಲು ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವುದು ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಸ ವಿಲೇವಾರಿ ಆಗುತ್ತಿಲ್ಲ: ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಪುರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಬಸವರಾಜ ತಾವರೆ ತಿಳಿಸಿದರು.