ಜಿಲ್ಲೆ ಮತ್ತು ತಾಲೂಕಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಬಹುತೇಕ ಅಧಿಕಾರಿಗಳು ಅಸಮರ್ಪಕ ಮಾಹಿತಿ ನೀಡಿದ್ದಾರೆ.
ಶಿರಹಟ್ಟಿ: ಇಡೀ ಜಿಲ್ಲೆಯ ಪರಿಸ್ಥಿತಿ ಗಮನಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ನರಗುಂದ ತಾಲೂಕನ್ನು ಬಿಟ್ಟರೆ ಇನ್ನುಳಿದ ೬ ತಾಲೂಕುಗಳಲ್ಲಿ ಬರಗಾಲದ ಘೋಷಣೆ ಮಾಡಲು ಅರ್ಹವಾಗಿದ್ದು, ಅಧಿಕಾರಿಗಳಿಂದ ರೈತರಿಗೆ ಅನ್ಯಾಯವಾಗಬಾರದು. ಮುಂದಿನ ಒಂದು ವಾರದೊಳಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೂಚಿಸಿದರು.ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ ಅಧ್ಯಯನ, ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಜಿಲ್ಲೆ ಮತ್ತು ತಾಲೂಕಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಬಹುತೇಕ ಅಧಿಕಾರಿಗಳು ಅಸಮರ್ಪಕ ಮಾಹಿತಿ ನೀಡಿದ್ದಾರೆ. ಇವರಿಗೆ ಜಿಲ್ಲಾಧಿಕಾರಿಗಳು ನೋಟೀಸ್ ನೀಡಿ ಒಂದು ವಾರದೊಳಗೆ ಸಮಗ್ರ ಮಾಹಿತಿ ಪಡೆದುಕೊಂಡು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.ಪ್ರಾಥಮಿಕ ವರದಿಯನ್ನೇ ಗಮನಿಸಿದರೆ ಯಾವುದೇ ಸಮಯದಲ್ಲೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬಹುದು. ವಾಡಿಕೆಯ ಮಳೆ ಜಿಲ್ಲೆಯಲ್ಲಿ ಶೇ. ೩೨ ಕಡಿಮೆ ಇದೆ. ತಾಲೂಕಿನಲ್ಲಿ ಶೇ. ೨೭ರಷ್ಟು ಮಳೆ ಕಡಿಮೆಯಾಗಿದೆ. ೯೦ ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಬರೀ ೭೦ ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ೫.೪೮೫ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಪ್ರಾಥಮಿಕ ವರದಿಯಂತೆ ಶೇ. ೫೦ರಷ್ಟು ಬೆಳೆಹಾನಿಯಾಗಿದೆ.ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒಂದು ವಾರದೊಳಗೆ ಅಧಿಕಾರಿಗಳು ವರದಿ ಸಿದ್ಧಪಡಿಸಿ ಸಲ್ಲಿಸಬೇಕು. ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ೧೬೮೧೫ ರೈತರು ವಿಮೆ ಹಣ ತುಂಬಿದ್ದಾರೆ. ೧೫೨೨೫ ಜನ ರೈತರು ಬೆಳೆವಿಮೆ ತುಂಬಿಲ್ಲ. ಇಂತಹ ರೈತರೂ ಬೆಳೆವಿಮೆ ಹಣದಿಂದ ವಂಚಿತರಾಗದಂತೆ ಅಧಿಕಾರಿಗಳು ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು. ತಾಲೂಕಿನಲ್ಲಿ ೧೦೩೯೦ಎಕರೆ ತೋಟಗಾರಿಗೆ ಬೆಳೆ ಬೆಳೆಯಲು ಬಿತ್ತನೆ ಕ್ಷೇತ್ರ ಗುರುತಿಸಲಾಗಿದೆ. ಈ ಬಾರಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ೮೨೫ ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ೫೬೦ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಹಾನಿಯಾಗಿದೆ. ಬಿತ್ತನೆಯಾಗಿರುವ ಬೆಳೆಗಳಲ್ಲಿ ಶೇ. ೫೦ಕ್ಕಿಂತಲೂ ಹೆಚ್ಚಿಗೆ ಬೆಳೆಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಕೂಡ ಶೇ. ೫೦ರಷ್ಟು ಹಣ ನೀಡಬೇಕಿದ್ದು, ಅದಕ್ಕೆ ಎಲ್ಲ ಅಧಿಕಾರಿಗಳು ಸುಮಾರು ಈ ಎರಡು ತಾಲೂಕಲ್ಲಿ ೩೩ ಸಾವಿರ ರೈತರು ಬೆಳೆವಿಮಾ ಯೋಜನೆ ವಿಮೆ ಕಟ್ಟಿದ್ದಾರೆ. ತುಂಬದೇ ಇರುವ ರೈತರು ಅಧಿಕಾರಿಗಳು ಅವರಿಗೂ ಅವಕಾಶ ಸಿಗುವ ರೀತಿಯಲ್ಲಿ ವರದಿ ನೀಡಬೇಕು ಎಂದರು.ಶಾಸಕ ಡಾ. ಚಂದ್ರು ಲಮಾಣಿ, ಡಿಸಿ ಸಿ.ಎನ್. ಶ್ರೀಧರ, ಎಸಿ ಗಂಗಪ್ಪ ಎಂ., ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.