ಬಂಟ್ವಾಳ : ಸಾಲ ಮರುಪಾವತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಸಹಕಾರ ರತ್ನ ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು. ಮಾಣಿ ಯ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ ನ ಮೊದಲ ಅಂತಸ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್( ಎಸ್ ಡಿ ಸಿ ಸಿ ಬ್ಯಾಂಕ್)ನ 113 ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಲದ ದೊರೆಯದ ಅಥವಾ ಸಾಲ ತೀರಿಸಲಾಗದೇ ರೈತ ಸಾವನ್ನಪ್ಪಿದ ಒಂದೇ ಒಂದು ಉದಾಹರಣೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲ , ಇದಕ್ಕೆ ಸಹಕಾರಿ ಸಂಘಗಳೇ ಪ್ರೇರಣೆ ಎಂದ ಅವರು, ನವೋದಯ ಸ್ವಸಹಾಯ ಸಂಘಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದೆ ಎಂದರು. ಮಾಣಿ ಶಾಖೆ ಆರಂಭ ದ ಸಂದರ್ಭದಲ್ಲೇ 1300 ಕ್ಕೂ ಹೆಚ್ಚು ಮಂದಿ ಖಾತೆ ತೆರೆದದ್ದು ಗಮನಾರ್ಹ ಠೇವಣಿ ಇರಿಸಿದ್ದು ಯಶಸ್ಸಿನ ಮುನ್ಸೂಚನೆ ಎಂದು ಅವರು ಹೇಳಿದರು. ನವೋದಯ ಸ್ವಸಹಾಯ ಉದ್ಘಾಟಿಸಿ ಮಾತನಾಡಿದ ರಮಾನಾಥ ರೈ ಅವರು, ಸಹಕಾರಿ ಸಂಘಗಳು ಸದಸ್ಯರಿಗೆ ಅವಶ್ಯಕತೆ ತಕ್ಕಂತೆ ದಕ್ಷಿಣ ಕನ್ನಡದಲ್ಲಿ ಸಾಲ ನೀಡಿಕೆ ಮತ್ತು ಮರುಪಾವತಿ ವ್ಯವಸ್ಥಿತವಾಗಿ ಆಗುವ ಕಾರಣಕ್ಕಾಗಿ ಇಲ್ಲಿನ ಸಹಕಾರಿ ಸಂಘಗಳು ಬೆಳೆದಿವೆ ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ ಜಿಲ್ಲಾ ಸಹಕಾರಿ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆ ಆಗಿದೆ ಎಂದರು. ಗಣಕಿರಣವನ್ನು ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರಿಂದ ಪುತ್ತೂರಿನಲ್ಲಿ ಆರಂಭವಾದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಾಧನೆ ಶ್ಲಾಘನೀಯ. ಸಹಕಾರಿ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ ಮಾಡಿ ಯಶೋಗಾಥೆ ಬರೆದ ಸಹಕಾರ ರತ್ನ ಎಂ ಎನ್ ಆರ್ ಸಹಕಾರಿ ರಂಗಕ್ಕೆ ಮಾದರಿ ವ್ಯಕ್ತಿ ಎಂದರು. ರಾಜೇಂದ್ರ ಕುಮಾರ್ ಕಾಲಿಟ್ಟಲೆಲ್ಲ ಯಶಸ್ಸು ಕಟ್ಟಿಟ್ಟ ಬುತ್ತಿ, ಸರಕಾರಿ ಮತ್ತು ಸಹಕಾರಿ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಕಡೆ ಸಾಗೋಣ ಎಂದರು. ಸಾಲಪತ್ರಗಳನ್ನು ಸದಸ್ಯರಿಗೆ ವಿತರಿಸಿದ ಮಾಣಿ ಗ್ರಾ. ಪಂ ಅಧ್ಯಕ್ಷ ಕೆ ಎಂ ಇಬ್ರಾಹಿಂ ಮಾಣಿ ಶಾಖೆ ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಗೆ ಮಾದರಿ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭದ್ರತಾ ಕೋಶವನ್ನು ನೇರಳಕಟ್ಟೆ ಸರಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜೇಂದ್ರ ಕುಮಾರ್ ಸೋಲಿಲ್ಲದ ಸರದಾರ. 29 ವರ್ಷಗಳ ಹಿಂದೆ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡಾಗ ಶಾಖೆಗಳ ಸಂಖ್ಯೆ 25 ಇತ್ತು, ಈಗ 113 ಆಗಿವೆ. ಎಲ್ಲಾ 112 ಶಾಖೆಗಳು ಯಶಸ್ವಿಯಾಗಿ ನಡೆಯುತ್ತಿದೆ. ಮಾಣಿ ಶಾಖೆ ಯಶಸ್ಸು ಪಡೆಯಲಿದೆ ಎಂದರು ವೇದಿಕೆಯಲ್ಲಿ ಉಪಸ್ಥಿತರಿದ್ದ ಕಟ್ಟಡದ ಮಾಲಕ ನಾರಾಯಣ ಪೈ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ , ಶಾಖಾ ವ್ಯವಸ್ಥಾಪಕಿ ವತ್ಸಲಾ, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ನಿರ್ದೇಶಕರಾದ ಟಿ. ಜಿ. ರಾಜಾರಾಮ ಭಟ್, ಶಶಿಕುಮಾರ್ ರೈ,ಸದಾಶಿವ ಉಳ್ಳಾಲ್ ,ಮೋನಪ್ಪ ಶೆಟ್ಟಿ ಎಕ್ಕಾರು ಜಯರಾಮ ರೈ ನವೋದಯ ಸ್ವಸಹಾಯ ಗುಂಪಿನ ಸದಸ್ಯರು ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಶಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಶೇಷ ಗೌರವ ಸಹಕಾರ ರತ್ನ ಎಂ ಎನ್. ರಾಜೇಂದ್ರ ಕುಮಾರ್ ಅವರನ್ನು ಸಾಧನೆಗಾಗಿ ವಿಶೇಷವಾಗಿ ಗೌರವಿಸಲಾಯಿತು. ಜಗತ್ ಪ್ರಾರ್ಥಿಸಿದರು. ನಿರ್ದೇಶಕರಾದ ಟಿ. ಜಿ.ರಾಜಾರಾಮ ಭಟ್ ಸ್ವಾಗತಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಆರ್ ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ನೂತನ ಶಾಖೆಯ ಉದ್ಘಾಟನೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅದೃಷ್ಟ ಚೀಟಿಯಲ್ಲಿ ಕೆದಿಲ ಗ್ರಾಮದ ಮೀನಾಕ್ಷಿ ಎಂ. ನಾಲ್ಕು ಗ್ರಾಂ ಚಿನ್ನದೊಂದಿಗೆ ಮೊದಲ ಸ್ಥಾನ ಪಡೆದರು. ಬಿಳಿಯೂರು ಗ್ರಾಮದ ಪುಷ್ಪಾನಂದ ಎರಡು ಗ್ರಾಮ್ ಚಿನ್ನದ ಜತೆ ದ್ವಿತೀಯ ಸ್ಥಾನ ಪಡೆದರು. ಠೇವಣಿ ಇಟ್ಟವರಲ್ಲಿ ಅದೃಷ್ಟ ವಂತರಾಗಿ ಬೆಳ್ಳಿಪಾಡಿಯ ಹೇಮಾವತಿ ನಾಲ್ಕು ಗ್ರಾಂ ಚಿನ್ನದ ಜತೆ ಪ್ರಥಮ ಹಾಗೂ ವಿಠಲಕೋಡಿಯ ಪದ್ಮನಾಭ ಪೂಜಾರಿ ಎರಡು ಗ್ರಾಂ ಚಿನ್ನ ದೊಂದಿಗೆ ದ್ವಿತೀಯ ಸ್ಥಾನ ಪಡೆದರು. ನವೋದಯ ಸ್ವ ಸಹಾಯ ಗುಂಪುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು ಕಾರ್ಯಕ್ರಮದ ಯಶಸ್ಸಿಗೆ ದುಡಿದವರನ್ನು ಗೌರವಿಸಲಾಯಿತು.