----ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಹಾಗೂ ನಗರದ ಆರ್ಥಿಕತೆಯನ್ನು ಹೆಚ್ಚಿಸಲು ಸಹಕಾರ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಮೈಮುಲ್ ಅಧ್ಯಕ್ಷ ಆರ್. ಚಲುವರಾಜು ತಿಳಿಸಿದರು.ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ರೈತರಿಗೆ ಕೃಷಿ ಜೊತೆಗೆ ಹೈನುಗಾರಿಕೆಯ ಆದಾಯವನ್ನು ತಂದುಕೊಡುತ್ತಿವೆ. ಜನರು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಮೈಮುಲ್ ನಲ್ಲಿ 1222 ಹಾಲು ಉತ್ಪಾದಕ ಸಂಘಗಳು ಅಸ್ತಿತ್ವದಲ್ಲಿದ್ದು, ನಿತ್ಯ 9 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದೆ. ಉತ್ಪಾದನೆಯಾದ ಎಲ್ಲಾ ಹಾಲನ್ನು ಸಂಸ್ಕರಿಸಿ ಉತ್ಪನ್ನಗಳಾಗಿ ಪರಿವರ್ತಿಸಿ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತಿದೆ. ನಂದಿನ ಉತ್ಪನ್ನಗಳು ಜನಪ್ರಿಯತೆ ಪಡೆದಿದ್ದು, ಉತ್ತಮ ಬೆಲೆ ನೀಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಅಗತ್ಯ ಸೌಲಭ್ಯದ ಪರಿಕರಗಳು, ಸಬ್ಸಿಡಿಯನ್ನು ಒಕ್ಕೂಟವು ನೀಡುತ್ತಿದೆ. ಅದರಿಂದ ಹೈನುಗಾರರಿಗೆ ನೆರವಾಗುತ್ತಿದೆ ಎಂದರು.ಮೈಸೂರು ನಗರದಲ್ಲಿ 200 ನಂದಿನಿ ಬೂತ್ ಗಳನ್ನು ಸ್ಥಾಪಿಸಲಾಗಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿದೆ. ಕಿರು ಉದ್ಯಮಗಳನ್ನು ಸ್ಥಾಪಿಸಲು ಸಹಕಾರ ಕ್ಷೇತ್ರದಲ್ಲಿ ವಿಪುಲ ಅವಕಾಶವಿದ್ದು, ಯುವ ಸಮುದಾಯವು ಈ ನಿಟ್ಟಿನಲ್ಲಿ ಆಲೋಚಿಸಿ ಉದ್ಯೋಗ ಸೃಷ್ಟಿಕರ್ತರಾಗಬೇಕು ಎಂದು ಅವರು ಸಲಹೆ ನೀಡಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್, ನಿರ್ದೇಶಕರಾದ ಎಂ.ಬಿ. ಮಂಜೇಗೌಡ, ವೈ. ಭೈರಪ್ಪ, ಪ್ರಶಾಂತ್ ತಾತಾಚಾರ್, ಕೆ. ಉಮಾಶಂಕರ್, ಮೈಮುಲ್ ಉಪಾಧ್ಯಕ್ಷ ಬಿ.ಎನ್. ಸದಾನಂದ, ನಿರ್ದೇಶಕರಾದ ಲೀಲಾ ನಾಗರಾಜು, ಡಿ.ಬಿ. ನಾಗರಾಜು, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್, ಸಹಕಾರ ನಿಬಂಧಕ ಎಸ್.ಎಚ್. ಮನೋಜ್ ಕುಮಾರ್, ಮೈಸೂರು ತಾಲೂಕು ಸಹಕಾರ ನಿರೀಕ್ಷ ಎಸ್. ಮಂಜು, ಕೆಐಸಿಎಂನ ಎಸ್. ಮಹದೇವಪ್ಪ ಮೊದಲಾದವರು ಇದ್ದರು.