ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕವು ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ವಿಭಾಗೀಯ ಪತ್ರಾಗಾರ ಕಚೇರಿ, ಮೈಸೂರು ಇವರ ಸಹಯೋಗದೊಂದಿಗೆ ಮೈಸೂರು ಸಂಸ್ಥಾನದ ಇತಿಹಾಸ ರಚನೆಯಲ್ಲಿ ಪತ್ರಾಗಾರ ದಾಖಲೆಗಳ ಮಹತ್ವ : ಒಂದು ಅವಲೋಕನ ಎಂಬ ವಿಷಯ ಕುರಿತಾದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಾಗಾರ ಇಲಾಖೆಯ ಸ್ವರೂಪ ಮತ್ತು ವ್ಯಾಪ್ತಿ ಬಹು ವಿಷಯದ ಸಂಗ್ರಹವಾಗಿದೆ ಎಂದು ತಿಳಿಸುವುದರೊಂದಿಗೆ ಪ್ರಸ್ತುತ ಸನ್ನಿವೇಶದಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ನಿಕಾಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮೊದಲ್ಗೊಂಡು ಅಧ್ಯಾಪಕರು ಸಹ ಸಂಗ್ರಹ ಯೋಗ್ಯವಾಗಿರುವ ಸುಮಾರು ಎರಡು ಲಕ್ಷ ಹದಿನಾರು ಸಾವಿರ ಇತಿಹಾಸ ಹಿನ್ನೆಲೆಯ ಕಡತಗಳನ್ನು ಅಧ್ಯಯನ ಮಾಡಿ ಮೈಸೂರು ಸಂಸ್ಥಾನ ಇತ್ತೀಚಿನ ಮಾದರಿಕರ್ನಾಟಕರಾಜ್ಯವಾಗಿ ರೂಪುಗೊಳ್ಳುವಲ್ಲಿ ಅಂದಿನ ರಾಜ ಮಹಾರಾಜರು, ದಿವಾನರು ಹಾಗೂ ಇತಿಹಾಸ ಚಿಂತಕರು ಸಾದರಪಡಿಸಿರುವ ಸಾರ್ಥಕ ಸೇವೆಯನ್ನು ಓದಿ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಚಿಂತನೆಯೊಂದಿಗೆ ಇತಿಹಾಸದಿಂದ ಪೂರಕ ಪಾಠವನ್ನು ಕಲಿತು ವಿದ್ವತ್ ನ್ನು ಗಳಿಸುವಲ್ಲಿ ನಿಖರವಾದ ಹಾಗೂ ಸತ್ಯಆಧಾರಿತವಾದ ಸಂಶೋಧನೆಗಳನ್ನು ನಡೆಸುವ ಅವಶ್ಯಕತೆಯನ್ನು ಅವರು ಪ್ರತಿಪಾದಿಸಿದರು.ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ ಮಾತನಾಡಿ, ಪ್ರತಿಷ್ಥಿತ ಜೆಎಸ್‌ಎಸ್ ಮಹಾವಿದ್ಯಾಪೀಠದ ಅಂಗ ಸಂಸ್ಥೆ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪರಮಪೂಜ್ಯರ ದಿವ್ಯದೃಷ್ಠಿಯ ಫಲದೊಂದಿಗೆ ಮೂಲ ಸೌಕರ್ಯಗಳನ್ನೊಂದಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಿಷಯಗಳಿಗೆ ಪೂರಕವಾಗಿರುವ ಪತ್ರಾಗಾರ ದಾಖಲೆಗಳ ಸಮೇತವಾದ ವಿಶ್ಲೇಷಣಾತ್ಮಕ ಎರಡು ದಿನಗಳ ವಿಚಾರ ಸಂಕಿರಣ ಸೀಮಾತೀತವಾದ ಸನ್ನಿವೇಶದಲ್ಲಿರುವ ಎಲ್ಲ ಶಿಕ್ಷಣಾರ್ಥಿಗಳಿಗೆ ಪೂರಕವಾಗಿದ್ದು, ಶಾಸನಗಳಂತೆ ಪತ್ರಿಕಾ ಅಡಕಗಳೂ ಕೂಡ ನಾಡಿನ ಅಸ್ಮಿತೆಯನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಡಿ.ಎಸ್. ಪ್ರತಿಮಾ ಮಾತನಾಡಿ, ಆಡಳಿತ ಸುಧಾರಣೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜಾಗತಿಕ ಮಟ್ಟದ ಬದಲಾದ ಸನ್ನಿವೇಶಗಳಿಗೆ ಅನುಗುಣವಾಗಿ ಮಾಹಿತಿಯನ್ನು ಸಂಗ್ರಹಿಸಿ ಇತಿಹಾಸದಿಂದ ಕಲಿತ ಪಾಠದಿಂದ ಶಾಂತಿ ಹಾಗೂ ಸುಭದ್ರ ಸಮಾಜ ಮತ್ತು ದೇಶವನ್ನುಕಟ್ಟುವ ಕಾರ್ಯವನ್ನು ಮಾಡುವಂತಾಗಲೆಂದು ಆಶಿಸಿದರು.
ವಿಚಾರ ಸಂಕಿರಣದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ವಿವಿಧ ವಿಷಯಗಳನ್ನು ಕುರಿತಾದ ಪ್ರಬಂಧ ಮಂಡನೆ ಹಾಗೂ ವಿಶೇಷ ಉಪನ್ಯಾಸಗಳು ಉದ್ದೇಶಿತ ಗುರಿಯನ್ನು ಸೇರುವುದರೊಂದಿಗೆ ಸಂಶೋಧಕರು ಹಾಗೂ ಪ್ರಬಂಧ ಮಂಡಕರು ವಿಚಾರ ಸಂಕಿರಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಉಪ ನಿರ್ದೇಶಕ ಎಚ್.ಎಲ್. ಮಂಜುನಾಥ, ವಿಚಾರ ಸಂಕಿರಣದ ಸಂಚಾಲಕ ಎನ್. ಮಂಜಪ್ಪ, ಅಧ್ಯಾಪಕರು, ಅಧ್ಯಾಪಕೇತರರು ಇದ್ದರು. ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎನ್. ಸೌಮ್ಯ, ಪ್ರಾರ್ಥಿಸಿದರು, ಎನ್. ಮಂಜಪ್ಪ ಸ್ವಾಗತಿಸಿದರು, ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎನ್. ನಿಜಗುಣಮ್ಮ ವಂದಿಸಿದರು, ಎಂ.ಎನ್. ಜಯಶೀಲ ನಿರೂಪಿಸಿದರು.