ಕನ್ನಡಪ್ರಭ ವಾರ್ತೆ ವಿಜಯಪುರಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಧವಾನಂದ ಪ್ರಭುಗಳಿಗಾಗಿ ಸಾರ್ವಜನಿಕರೇ ದೇಣಿಗೆ ಸಂಗ್ರಹಿಸಿ ಇಂಚಗೇರಿಯಲ್ಲಿ ನಿರ್ಮಿಸಿರುವ ಚಿನ್ನಲೇಪಿತ ಗೋಪುರದ ದೇಗುಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು. ದೇಶದಲ್ಲೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಿರ್ಮಿಸಿದ ಮೊದಲ ಬೃಹತ್ ದೇಗುಲ ಇದಾಗಿದೆ.
ಎಲ್ಲರನ್ನೂ ಪ್ರೀತಿಸಬೇಕು, ಗೌರವಿಸಬೇಕು. ಇದನ್ನೇ ಮಾಧವಾನಂದರು ಮಾಡಿರುವ ಕೆಲಸ. ಹಾಗಾಗಿಯೇ ಇದನ್ನು ಜಾತ್ಯತೀತ ಮಠ ಎಂದು ಕರೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
50 ಕೋಟಿ ವೆಚ್ಚದ ದೇಗುಲ?:ಭಕ್ತರೇ ದೇಣಿಗೆ ಸಂಗ್ರಹಿಸಿ 50ಕೋಟಿ ರು. ವೆಚ್ಚದಲ್ಲಿ ಈ ದೇಗುಲ ನಿರ್ಮಿಸಿದ್ದಾರೆ. 101 ಅಡಿ ಎತ್ತರದ ಈ ದೇಗುಲದ ಗೋಪುರ ಮತ್ತು ಒಳಭಾಗವನ್ನು ಚಿನ್ನದಿಂದ ಲೇಪನ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ, ಇಂಚಗೇರಿ ಮಠದ ಸ್ವಾಮೀಜಿಗಳಾದ ಶ್ರೀ ಮಾಧವಾನಂದ ಪ್ರಭುಗಳಿಗಾಗಿ ಈ ದೇಗುಲ ನಿರ್ಮಿಸಲಾಗಿದೆ. 30 ವರ್ಷದಿಂದ ಸಂಗ್ರಹಿಸಿದ ಈ ಹಣದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.