ಅ.೧೬ಕ್ಕೆ ಮಂಡ್ಯ ನಗರ ತರಕಾರಿ ಮಾರುಕಟ್ಟೆ ಲೋಕಾರ್ಪಣೆ

KannadaprabhaNewsNetwork |  
Published : Oct 14, 2025, 01:00 AM IST
೧೩ಕೆಎಂಎನ್‌ಡಿ-೧ಮಂಡ್ಯದಲ್ಲಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆ ದೃಶ್ಯ. | Kannada Prabha

ಸಾರಾಂಶ

ಮಂಡ್ಯ ನಗರದ ಹೃದಯಭಾಗದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆ ಅ.೧೬ರಂದು ಲೋಕಾರ್ಪಣೆಗೊಳ್ಳಲಿದೆ. ಸುಮಾರು ೯ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೃದಯಭಾಗದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆ ಅ.೧೬ರಂದು ಲೋಕಾರ್ಪಣೆಗೊಳ್ಳಲಿದೆ. ಸುಮಾರು ೯ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಕಳೆದ ಏಳು ತಿಂಗಳ ಹಿಂದೆ ನಗರದ ಪೇಟೆಬೀದಿಯಲ್ಲಿರುವ ಎರಡು ಎಕರೆ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ತಲೆಎತ್ತಿ ನಿಂತಿತು. ಆದರೆ, ಮೂಲಸೌಲಭ್ಯಗಳನ್ನು ಒದಗಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದ್ದರಿಂದ ಉದ್ಘಾಟನೆ ಮುಂದೂಡಲಾಯಿತು. ಮಾರುಕಟ್ಟೆ ಪ್ರಾಂಗಣದಲ್ಲಿ ೧೧೭ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಉದ್ಘಾಟನೆ ಬಳಿಕ ಮಳಿಗೆಗಳ ಹಂಚಿಕೆ ಕಾರ್ಯ ನಡೆಯಲಿದೆ.

ಹಲವು ದಶಕಗಳ ಕನಸಾಗಿದ್ದ ಮಂಡ್ಯ ತರಕಾರಿ ಮಾರುಕಟ್ಟೆಗೆ ಸರ್ಕಾರದಿಂದ ಅನುಮೋದನೆ ದೊರಕಿಸಿಕೊಡುವಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜು ಅವರು ತೀವ್ರ ಶ್ರಮವಹಿಸಿದ್ದರು. ೮ ಕೋಟಿ ರು. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತು. ಮೊದಲ ಹಂತದಲ್ಲಿ ೪ ಕೋಟಿ ರು. ಹಾಗೂ ಎರಡನೇ ಹಂತದಲ್ಲಿ ೩.೮೦ ಕೋಟಿ ರು. ಹಣ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ದೊರಕುವಂತೆ ಮಾಡಲಾಯಿತು.

ನೂತನ ಮಾರುಕಟ್ಟೆಯೊಳಗೆ ಆ ನಂತರದಲ್ಲಿ ೧.೨೦ ಕೋಟಿ ರು. ವೆಚ್ಚದಲ್ಲಿ ಕಾಂಪೌಂಡ್, ಫೆನ್ಸಿಂಗ್, ವಿದ್ಯುತ್, ಫುಟ್‌ಪಾತ್, ಒಳಚರಂಡಿ, ಕುಡಿಯುವ ನೀರು, ಶೌಚಾಲಯ ಜೊತೆಗೆ ಉಪಹಾರ ಮಂದಿರವನ್ನೂ ನಿರ್ಮಿಸಲಾಗಿದೆ. ತರಕಾರಿ ಮಾರುಕಟ್ಟೆ ಪ್ರವೇಶಕ್ಕೆ ನಾಲ್ಕೂ ಕಡೆಗಳಿಂದ ಪ್ರವೇಶ ದ್ವಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಮೊದಲು ಕಿಷ್ಕಿಂದ ಸ್ಥಳದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಕೆಡವಿ ವಿಶಾಲವಾಗಿ, ಸುವ್ಯವಸ್ಥಿತವಾಗಿ ನಿರ್ಮಿಸುವ ಸಲುವಾಗಿ ಮಾರುಕಟ್ಟೆಯನ್ನು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲಾಯಿತು. ಮೊದಲು ನಗರದಿಂದ ದೂರ ಎಂಬ ಕಾರಣಕ್ಕೆ ಹೋಗಲು ನಿರಾಕರಿಸಿದವರು ಆನಂತರದಲ್ಲಿ ಎಲ್ಲರನ್ನೂ ಮನವೊಲಿಸಿ ಸ್ಥಳಾಂತರ ಮಾಡುವಲ್ಲಿ ಅಂದಿನ ಅಧ್ಯಕ್ಷ ಹೆಚ್.ಎಸ್.ಮಂಜು ಹಾಗೂ ಆಯುಕ್ತರಾಗಿದ್ದ ಲೋಕೇಶ್ ಅವರು ಯಶಸ್ವಿಯಾಗಿದ್ದರು.

ಇದೀಗ ವಿಶಾಲ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಾಣಗೊಂಡಿದೆ. ಮಾರುಕಟ್ಟೆ ಲೋಕಾರ್ಪಣೆಗೊಳ್ಳುತ್ತಿರುವುದರಿಂದ ವರ್ತಕರು ಹಾಗೂ ವ್ಯಾಪಾರಿಗಳೂ ಖುಷಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಕಳೆಗುಂದಿದ್ದ ಮಾರುಕಟ್ಟೆ ಮತ್ತೆ ಜನಸಂದಣಿಯಿಂದ ತುಂಬಿಕೊಳ್ಳಲಿದೆ. ಮಳೆ, ಗಾಳಿ, ಚಳಿಗೆ ನಲುಗುತ್ತಿದ್ದ ವ್ಯಾಪಾರಿಗಳಿಗೆ ಇದೀಗ ಸುಸಜ್ಜಿತ ಸೂರು ದೊರಕಿದಂತಾಗಿದ್ದು, ಅಂಗಡಿ ಮಳಿಗೆಗಳ ಹಂಚಿಕೆ ಕಾರ್ಯವೂ ತ್ವರಿತಗತಿಯಲ್ಲಿ ನಡೆಯಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.ಮಳಿಗೆಗಳ ಹಂಚಿಕೆಯೇ ಸವಾಲು

ಅಂಗಡಿ ಮಳಿಗೆಗಳ ಹಂಚಿಕೆಯೇ ಇದೀಗ ನಗರಸಭೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಟ್ಟು ೧೬೦ ಮಂದಿ ವ್ಯಾಪಾರಸ್ಥರಿದ್ದರೆಂದು ಹೇಳಲಾಗುತ್ತಿದೆ. ಆದರೆ, ತರಕಾರಿ ಮಾರುಕಟ್ಟೆಯಲ್ಲಿರುವುದು ಕೇವಲ ೧೧೭ ಮಳಿಗೆಗಳು ಮಾತ್ರ. ೪೩ ಮಂದಿಗೆ ಮಳಿಗೆಗಳ ಅವಶ್ಯಕತೆ ಇದೆ. ಹೊಸದಾಗಿ ನಿರ್ಮಾಣ ಮಾಡುವುದಕ್ಕೆ ಅಲ್ಲಿ ಯಾವುದೇ ಸ್ಥಳಾವಕಾಶವಿಲ್ಲ. ಇದರ ನಡುವೆ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಿದ ಬಳಿಕ ಅನೇಕರು ತರಕಾರಿ ಮಾರಾಟವನ್ನೇ ನಿಲ್ಲಿಸಿದ್ದಾರೆ. ಹಾಗಾಗಿ ಮಳಿಗೆಗಳ ಹಂಚಿಕೆಗೆ ತೊಂದರೆಯಾಗುವುದಿಲ್ಲ. ಕೆಲವರಿಗೆ ಪ್ರಾಂಗಣದೊಳಗೆ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬಹುದೆಂದೂ ಹೇಳಲಾಗುತ್ತಿದೆ. ಇವೆಲ್ಲವೂ ಅಂಗಡಿಗಳ ಹಂಚಿಕೆ ಪ್ರಕ್ರಿಯೆ ವೇಳೆಗೆ ಬಹಿರಂಗವಾಗಲಿದೆ.ತರಕಾರಿ ಮಾರುಕಟ್ಟೆ ನಿರ್ಮಾಣಗೊಂಡು ಏಳು ತಿಂಗಳು ಕಳೆದಿತ್ತು. ಮಾರುಕಟ್ಟೆಗೆ ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಉಪಹಾರಮಂದಿರ ಸೇರಿದಂತೆ ಕೆಲವೊಂದು ಮೂಲಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸಮಯ ಹಿಡಿಯಿತು. ಇದೀಗ ಸಕಲ ಸೌಲಭ್ಯಗಳೊಂದಿಗೆ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಸಜ್ಜಾಗಿದೆ. ಅ.೧೬ರಂದು ಅಧಿಕೃತವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾರುಕಟ್ಟೆಯನ್ನು ಲೋಕಾರ್ಪಣೆ ಮಾಡುವರು. ಆನಂತರ ಮಳಿಗೆಗಳ ಹಂಚಿಕೆ ಕಾರ್ಯವನ್ನು ಸುಗಮವಾಗಿ ನಡೆಸಲಾಗುವುದು.

- ಎಂ.ವಿ.ಪ್ರಕಾಶ್ (ನಾಗೇಶ್), ಅಧ್ಯಕ್ಷರು, ನಗರಸಭೆ

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ