21ರಂದು ನಂದಿನಿ ಉಡುಪಿ ಡೈರಿ ಕಚೇರಿಗೆ ಶಂಕುಸ್ಥಾಪನೆ;24ರಂದು ಮಂಗಳೂರು ಡೈರಿ ವಸತಿ ಸಮುಚ್ಛಯ ಉದ್ಘಾಟನೆ

KannadaprabhaNewsNetwork | Published : Jan 19, 2024 1:51 AM

ಸಾರಾಂಶ

ಉಡುಪಿ ಡೈರಿಯ ಆಡಳಿತ ಕಚೇರಿ 4.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಉಪಾಹಾರ ಗೃಹ 1.50 ಕೋಟಿ ರು.ಗಳಲ್ಲಿ ನಿರ್ಮಾಣಗೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ನಂದಿನಿ) ಇದರ ಉಡುಪಿ ಡೈರಿ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನೆ ಜ. 21ರಂದು ನಡೆಯಲಿದೆ. ಜ. 24ರಂದು ಮಂಗಳೂರು ಡೈರಿ ಉಗ್ರಾಹಣದ ಶಂಕುಸ್ಥಾಪನೆ ಹಾಗೂ ಸಿಬ್ಬಂದಿಯ ವಸತಿ ಸಮುಚ್ಛಯ ಉದ್ಘಾಟನೆ ನೆರವೇರಲಿದೆ. ಗುರುವಾರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಉಡುಪಿ ಡೈರಿಯ ಆಡಳಿತ ಕಚೇರಿ 4.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಉಪಾಹಾರ ಗೃಹ 1.50 ಕೋಟಿ ರು.ಗಳಲ್ಲಿ ನಿರ್ಮಾಣಗೊಂಡಿದೆ ಎಂದರು.ಮಂಗಳೂರು ಡೈರಿ ಉಗ್ರಾಣ 7.25 ಕೋಟಿ ರು.ಗಳಲ್ಲಿ ನಿರ್ಮಾಣವಾಗಲಿದೆ. ಸಿಬ್ಬಂದಿಗಾಗಿ 6 ಕೋಟಿ ರು. ವೆಚ್ಚದಲ್ಲಿ 15 ಫ್ಲ್ಯಾಟ್‌ಗಳ ವಸತಿ ಸಮುಚ್ಚಯವನ್ನು ಖರೀದಿಸಲಾಗಿದೆ ಎಂದು ಅವರು ತಿಳಿಸಿದರು.ಜ.21ರಂದು ಬೆಳಗ್ಗೆ 11.30ಕ್ಕೆ ಉಡುಪಿ ಡೈರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌ ಉದ್ಘಾಟಿಸುವರು. ಆಡಳಿತ ಕಚೇರಿಗೆ ಕರ್ನಾಟಕ ಹಾಲು ಮಹಾ ಮಂಡಳಿಯ ಅಧ್ಯಕ್ಷ ಎಲ್‌.ಪಿ. ಭೀಮಾ ನಾಯ್ಕ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನೂತನ ಉಪಾಹಾರ ಗೃಹವನ್ನು ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು ಎಂದರು.

ಜ.24ರಂದು ಬೆಳಗ್ಗೆ 11.30ಕ್ಕೆ ಮಂಗಳೂರು ಡೈರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್‌ ಉದ್ಘಾಟಿಸಲಿದ್ದು, ವಸತಿ ಸಮುಚ್ಚಯ ಉದ್ಘಾಟನೆ ಹಾಗೂ ಉಗ್ರಾಣದ ಶಂಕು ಸ್ಥಾಪನೆಯನ್ನು ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ನೆರವೇರಿಸುವರು ಎಂದರು.

ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ, ನಿರ್ದೇಶಕರಾದ ನರಸಿಂಹ ಕಾಮತ್‌, ಬಿ. ಸುಧಾಕರ ರೈ, ಸ್ಮಿತಾ ಆರ್‌.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಡಿ. ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್‌ ಉಡುಪ ಮತ್ತಿತರರು ಇದ್ದರು.609.85 ಲಕ್ಷ ರು. ಲಾಭ: 2022-23ನೇ ಸಾಲಿನಲ್ಲಿ ಹಾಲು ಒಕ್ಕೂಟ ಸರಾಸರಿ 1,04,448 ಲಕ್ಷ ರು. ವ್ಯವಹಾರ ನಡೆಸಿದ್ದು, 609.85 ಲಕ್ಷ ರು. ಲಾಭ ಗಳಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಮಾಹಿತಿ ನೀಡಿದರು.ನಂದಿನಿ ಹಾಲಿನ ವಿತರಣಾ ಮಾರ್ಗದ ವಾಹನಗಳಿಗೆ ಶೇ. 100ರಷ್ಟುಜಿಪಿಎಸ್‌ ಅಳವಡಿಸಲಾಗಿದೆ. ಇದರಿಂದ ಡೀಲರ್‌ಗಳಿಗೆ ಒಕ್ಕೂಟದ ವಾಹನಗಳ ಸಂಚಾರ ಮಾಹಿತಿ ನಿರಂತರ ಲಭ್ಯವಾಗುವಂತೆ ಮಾಡಲಾಗಿದೆ. ನಗದು ರಹಿತ ಪದ್ಧತಿ ಪ್ರೋತ್ಸಾಹಿಸಲು ಒಕ್ಕೂಟ ನಂದಿನಿ ಅಧಿಕೃತ ಡೀಲರುಗಳಿಗೆ ಡೈಲಿ ಆರ್ಡರ್‌ ಆ್ಯಪ್‌ ಅಳವಡಿಸಿದೆ. 2023ರ ಫೆಬ್ರವರಿ 26ರಿಂದ ನಗದು ರಹಿತ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಸಹಕಾರಿ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿಯೇ ಪ್ರಥಮವಾಗಿ ನಗದು ರಹಿತ ವ್ಯವಹಾರವನ್ನು ಆರಂಭಿಸಿದ ಪ್ರಥಮ ಒಕ್ಕೂಟವಾಗಿ ನಂದಿನಿ ಮೂಡಿ ಬಂದಿದೆ ಎಂದರು.

Share this article