ಕನ್ನಡಪ್ರಭ ವಾರ್ತೆ ಹುಣಸೂರುರಾಜಕೀಯ ಅಧಿಕಾರ ಎಂಬ ಕೀಲಿ ಕೈ ಇದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಕಾಂಗ್ರೆಸ್ ಕಟ್ಟಾಳುಗಳು ಈ ನಿಟ್ಟಿನಲ್ಲಿ ಪಕ್ಷ ಸಂಘಟಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ಪಟ್ಟಣದಲ್ಲಿ ಆಯೋಜಿಸಿದ್ದ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಮೂಲತಃ ಬಡವರ ಪರವಾಗಿದೆ. ಸಾಕಷ್ಟು ಕಾರ್ಯಕ್ರಮಗಳ ಮೂಲಕ ಜನರಲ್ಲಿ ನಂಬಿಕೆ, ವಿಶ್ವಾಸ ಉಂಟು ಮಾಡಿದ್ದು, ಜನರಿಗೆ ನಮ್ಮ ಕಾರ್ಯಕ್ರಮಗಳನ್ನು ಮನವರಿಕೆ ಮಾಡಬೇಕು. ಕೇಂದ್ರದ ಆಡಳಿತಾರೂಢ ಬಿಜೆಪಿ ತಳಸಮುದಾಯ ಮತ್ತು ಅಲ್ಪಸಂಖ್ಯಾತರನ್ನು ತುಳಿಯುವ ಗುರಿ ಹೊಂದಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಸರ್ವರ ಸರ್ವತೋಮುಖ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸಿ ರಾಷ್ಟ್ರದ ಎಲ್ಲ ವರ್ಗವನ್ನು ಸಮನಾಗಿ ಕಂಡ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಅವರು ಹೇಳಿದರು.ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಅಧಿಕಾರವಿರಲಿ, ಇಲ್ಲದಿರಲಿ ಸದಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಧಿಕಾರವಿಲ್ಲದಿದ್ದರೂ ಸರ್ಕಾರದ ಮೇಲೆ ಒತ್ತಡ ಹಾಕಿ ತಾಲೂಕಿನ ಕಟ್ಟೆಮಳಲವಾಡಿ ನಾಲೆಗಳ ಅಭಿವೃದ್ಧಿ, ಮರದೂರು ಏತ ನೀರಾವರಿ ಯೋಜನೆ ಮಂಜೂರು, ಹೈಟೆಕ್ ಆಸ್ಪತ್ರೆಗೆ ಅನುದಾನ ಬಿಡುಗಡೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಇವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ರಾಜ್ಯ ಸರ್ಕಾರ ಯೂರಿಯಾ ರಸಗೊಬ್ಬರ ಸರಬರಾಜಿಗೆ ಎಲ್ಲ ಕ್ರಮ ಕೈಗೊಂಡಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿದೆ. ಅತಿ ಶೀಘ್ರದಲ್ಲೇ ಯೂರಿಯ ರಸಗೊಬ್ಬರ ಬೇಡಿಕೆ ಪೂರೈಸಲಿದ್ದೇವೆ ಎಂದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ. ಶಿವಕುಮಾರ್, ಅಧ್ಯಕ್ಷ ಕಾಂಬಿನೇಷನ್ ನಿಂದ ಪಕ್ಷ ಸದೃಢವಾಗಿದೆ. ಮುಂದೆ ನಗರಸಭೆ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳು ಬರುತ್ತಿದ್ದು, ನೂತನವಾಗಿ ನೇಮಕಗೊಂಡ ನಾಯಕರು ಹಾಗೂ ಪದಾಧಿಕಾರಿಗಳು ಮುಂದಿನ 15 ದಿನಗಳಲ್ಲಿ ಬ್ಲಾಕ್ ಹಾಗೂ ಬೂತ್ ಮಟ್ಟದ ಕಮಿಟಿ ರಚಿಸಬೇಕು ಎಂದು ಸೂಚಿಸಿದರು.ಮಾಜಿ ಸಂಸದ ಉಗ್ರಪ್ಪ ಮಾತನಾಡಿ, 2026ಕ್ಕೆ ಲೋಕಸಭೆ ಮತ್ತು ವಿಧಾನಸಭೆ ಪುನರ್ ವಿಂಗಡಣೆಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ340ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರ 42ಕ್ಕೆರುವ ಸಾಧ್ಯತೆ ಇದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಮಂತ್ರಿ ಮೋದಿಯವರು ಕನಿಷ್ಠ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ತಾಕತ್ತಿದ್ದರೆ ಶೋಷಿತ ಸಮುದಾಯಗಳ ಪಟ್ಟಿಗೆ ಸೇರುವ ನಯನ ಕ್ಷತ್ರಿಯ, ಮಡಿವಾಳ ಸಮಾಜವನ್ನು ಎಸ್.ಟಿ.ಗೆ ಸೇರಿಸಲಿ ಎಂದು ಆಗ್ರಹಿಸಿದರು.ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ತಾನು ಪ್ರಥಮವಾಗಿ ಶಾಸಕನಾಗಿದ್ದ ಅವಧಿಯಲ್ಲಿ ಯೂರಿಯಾ ಕೊರತೆ ಎದುರಾದ ವೇಳೆ 35 ಲಕ್ಷ ರು. ವೆಚ್ಚದ ಯೂರಿಯಾ ತರಿಸಿ ಸಹಕಾರ ಸಂಘಗಳ ಮೂಲಕ ತಾಲೂಕಿನ ರೈತರಿಗೆ ವಿತರಿಸಿದ್ದೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ತಂದು ಅಭಿವೃದ್ಧಿ ವಡಿಸಿದ್ದೇನೆ. ಕ್ಷೇತ್ರದಲ್ಲಿ ಈಗ ರಸ್ತೆಗಳ ಗುಂಡಿ ಮುಚ್ಚಲಾಗಿಲ್ಲ. ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್, ಬೋವಿ ನಿಗಮದ ಅಧ್ಯಕ್ಷ ರಾಮಪ್ಪಬೋವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ಮಾಜಿ ಕಾಯದರ್ಶಿ ಎಚ್.ಎನ್. ಪ್ರೇಮಕುಮಾರ್, ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿದರು. ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಎಚ್.ಎನ್. ಪ್ರೇಮಕುಮಾರ್, ರಾಮಪ್ಪ ಭೋವಿ, ಎಚ್.ಡಿ. ಗಣೇಶ್, ನಾರಾಯಣ್, ಪುಟ್ಟರಾಜ್, ರಮೇಶ್, ಅಣ್ಣಯ್ಯನಾಯಕ, ಡಿ.ಕೆ. ಕುನ್ನೇಗೌಡ, ಚಂದ್ರನ್ ಗೌಡ, ಬಿ.ಎನ್. ಜಯರಾಂ. ಸುನಿತಾ ಜಯರಾಮೇಗೌಡ, ಎ.ಪಿ. ಸ್ವಾಮಿ, ಬಸವರಾಜೇಗೌಡ, ಬಸವರಾಜ್, ಅಣ್ಣಯ್ಯನಾಯಕ, ಚಿನ್ನವೀರಯ್ಯ, ಅಜ್ಗರ್ ಪಾಷಾ, ಟಿ. ಕೃಷ್ಣ, ರಾಜು ಶಿವರಾಜೇಗೌಡ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ರಘು, ಕುಮಾರ್, ಚಿಕ್ಕಸ್ವಾಮಿ ಇದ್ದರು.ನೂತನ ಪದಾಧಿಕಾರಿಗಳಾಗಿ ದೇವರಾಜ್ (ತಾಲೂಕು ಘಟಕದ ಕಾರ್ಯಾಧ್ಯಕ್ಷ), ರವಿಪ್ರಸನ್ನ ಕುಮಾರ್ (ನಗರಾಧ್ಯಕ್ಷ), ಪ್ರೇಮಕುಮಾರ್ (ಬಿಳಿಕೆರೆ ಬ್ಲಾಕ್ ಅಧ್ಯಕ್ಷ), ಬಾಲಸುಂದರ್ (ಹುಣಸೂರು ಗ್ರಾಮಾಂತರ ಅಧ್ಯಕ್ಷ) ಅಧಿಕಾರ ಸ್ವೀಕರಿಸಿದರು.