ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣ ಇನ್ನಿತರ ವಿಚಾರಗಳಲ್ಲಿ ಪರಿಶಿಷ್ಟ ಜಾತಿಯವರಿಗೆ 6-6-5 ಫಾರ್ಮೂಲಾ ಪ್ರಕಾರ ಒಳ ಮೀಸಲಾತಿ ಜಾರಿ ಮಾಡಲು ಹೊರಡಿಸಿದ್ದ ಐತಿಹಾಸಿಕ ಆದೇಶಕ್ಕೆ ಕಾನೂನು ಬಲ ನೀಡಲು ‘ಕರ್ನಾಟಕ ಪರಿಶಿಷ್ಟ ಜಾತಿಗಳ  ವಿಧೇಯಕ- 2025’ ಜಾರಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

 ಸುವರ್ಣ ವಿಧಾನಸೌಧ : ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣ ಇನ್ನಿತರ ವಿಚಾರಗಳಲ್ಲಿ ಪರಿಶಿಷ್ಟ ಜಾತಿಯವರಿಗೆ 6-6-5 ಫಾರ್ಮೂಲಾ ಪ್ರಕಾರ ಒಳ ಮೀಸಲಾತಿ ಜಾರಿ ಮಾಡಲು ಹೊರಡಿಸಿದ್ದ ಐತಿಹಾಸಿಕ ಆದೇಶಕ್ಕೆ ಕಾನೂನು ಬಲ ನೀಡಲು ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕ- 2025’ ಜಾರಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಒಳ ಮೀಸಲಾತಿ ಜಾರಿ ಮಾಡಲು ತೀರ್ಮಾನ

ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲೇ ಈ ಕುರಿತು ವಿಧೇಯಕ ಮಂಡಿಸಿ ಅಂಗೀಕರಿಸುವ ಮೂಲಕ ಎಸ್ಸಿಯ ಶೇ.17 ರಷ್ಟು ಮೀಸಲಾತಿಯಲ್ಲಿ ಎಡಗೈ, ಬಲಗೈ ಹಾಗೂ ಸ್ಪೃಶ್ಯ ಮತ್ತು ಅತಿಸೂಕ್ಷ್ಮ ಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ವಿವಿಧ ಜಾತಿಗಳಿಗೆ ಇರುವ ಶೇ.56 ಮೀಸಲಾತಿಯನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ಮುಂದುವರೆಸಲು ಸಹ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾ. ನಾಗಮೋಹನ್‌ದಾಸ್‌ ಆಯೋಗ ಶಿಫಾರಸು ಮಾಡಿದ್ದ 5 ಪ್ರವರ್ಗ ಬದಲು 3 ಪ್ರವರ್ಗಗಳಾಗಿ ಪರಿಷ್ಕರಣೆ ಹಾಗೂ ಕೆಲ ಮಾರ್ಪಾಡುಗಳೊಂದಿಗೆ ಆಗಸ್ಟ್‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಅಂಗೀಕಾರ ಮಾಡಲಾಗಿತ್ತು. ಇದರಂತೆ ಆದೇಶ ಹೊರಡಿಸಿ ಎಡಗೈ ಸಂಬಂಧಿತ ಜಾತಿಗಳಿಗೆ ಶೇ.6, ಬಲಗೈ ಜಾತಿಗಳಿಗೆ ಶೇ.6 ಹಾಗೂ ಸ್ಪೃಷ್ಯ ಜಾತಿಗಳು, ಅತಿಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇ.5 ಮೀಸಲಾತಿ ನೀಡಲು ಮಹತ್ವದ ತೀರ್ಮಾನ ಮಾಡಲಾಗಿತ್ತು.

ಆದರೆ, ಸರ್ಕಾರವು ನಾಗಮೋಹನ್‌ ದಾಸ್‌ ಸಮಿತಿ ಶಿಫಾರಸು ಉಲ್ಲಂಘಿಸಿ ಪರಯ, ಮೊಗೇರ ಮುಂತಾದ ಸಮುದಾಯಗಳ ವರ್ಗೀಕರಣ ಬದಲಿಸಿತ್ತು. ಜತೆಗೆ ನಾಗಮೋಹನ್‌ ದಾಸ್‌ ಸಮಿತಿಯು ಬಲಗೈಗೆ ನೀಡಿದ್ದ ಶೇ.5ರ ಬದಲು ಶೇ.6 ರಷ್ಟು ಒಳ ಮೀಸಲಾತಿ ಜಾರಿ ಮಾಡಲು ತೀರ್ಮಾನಿಸಿತ್ತು. ಜತೆಗೆ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಶೇ.1 ರಷ್ಟು ಮೀಸಲಾತಿಯನ್ನು ಸ್ಪೃಷ್ಯರ (ಶೇ.4 ರಷ್ಟಿದ್ದ) ಸೇರಿಸಿ ಸ್ಪೃಶ್ಯರ ಮೀಸಲಾತಿ ಶೇ.5 ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಆಗಿದೆ ಎಂದು ಅಲೆಮಾರಿ ಸಮುದಾಯದವರು ನ್ಯಾಯಾಲಯ ಮೆಟ್ಟಿಲೇರಿದ್ದರು.

ಈ ಬಗ್ಗೆಯೂ ಚರ್ಚೆ ನಡೆಸಿದ್ದು, ಕೆಲ ಸಮುದಾಯಗಳ ವರ್ಗೀಕರಣವನ್ನು ಬದಲು ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಧೇಯಕ್ಕೆ ಅಂಗೀಕಾರ ಪಡೆಯಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶೇ.56 ರಷ್ಟು ಮೀಸಲಾತಿಗಾಗಿ ಹೋರಾಟಕ್ಕೆ ನಿರ್ಧಾರ: ರಾಜ್ಯದಲ್ಲಿ ಶೇ.56 ಮೀಸಲಾತಿ ಜಾರಿ ಮಾಡಲು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ್ದು, ಒಟ್ಟು ಮಿತಿ ಶೇ.50 ರಷ್ಟು ಮೀರಬಾರದು ಎಂದು ಹೇಳಿದೆ. ಆದರೆ, ಮೀಸಲಾತಿ ಪಡೆಯುತ್ತಿರುವ ಸಮುದಾಯಗಳ ಹಿತರಕ್ಷಣೆಗಾಗಿ ಶೇ.56 ರಷ್ಟು ಮೀಸಲಾತಿ ಜಾರಿಗೆ ಕಾನೂನು ಹೋರಾಟ ಮುಂದುವರೆಸಬೇಕು ಎಂದು ತೀರ್ಮಾನಿಸಲಾಗಿದೆ.

 50% ಮಿತಿಯಿಂದ 56% ಮೀಸಲಾತಿ ಮಿತಿ ಉಳಿಸಿಕೊಳ್ಳಲು ಕಾನೂನು ಹೋರಾಟ

ಹೈಕೋರ್ಟ್‌ನ ಮಧ್ಯಂತರ ಆದೇಶದ ಕುರಿತು ಸಚಿವ ಸಂಪುಟವು ವಿವರವಾದ ಚರ್ಚೆ ನಡೆಸಿ, ಸಾಂವಿಧಾನಿಕ 50% ಮಿತಿಯಿಂದ 56% ಮೀಸಲಾತಿ ಮಿತಿಯನ್ನು ಉಳಿಸಿಕೊಳ್ಳಲು ಅಗತ್ಯವಾದ ಕಾನೂನು ಹೋರಾಟ ಮುಂದುವರೆಸಬೇಕು. ಇದನ್ನು ಕಾರ್ಯಗತಗೊಳಿಸಲು ಇಲಾಖೆಗಳಲ್ಲಿ ಯಾವುದೇ ಅಡೆ ತಡೆ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ. ಬಾಕ್ಸ್... ಶಾಶ್ವತ ಆಯೋಗ ರಚನೆ ಬಗ್ಗೆ ನಿರ್ಧಾರವಿಲ್ಲ

ಇದೇ ವೇಳೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾದರಿಯಲ್ಲಿ ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚನೆ ಮಾಡಬೇಕು. ಕಾಲಕಾಲಕ್ಕೆ ಅಧ್ಯಯನ ನಡೆಸಿ ಒಳ ಮೀಸಲಾತಿ ಪರಿಷ್ಕರಣೆಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಈ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದು ತಿಳಿದುಬಂದಿದೆ..